ಜೆಡಿ ವ್ಯಾನ್ಸ್ ಇಂದು ಭಾರತಕ್ಕೆ ಭೇಟಿ : ದೆಹಲಿಯಲ್ಲಿ ಹೈ ಸೆಕ್ಯೂರಿಟಿ

ನವದೆಹಲಿ:

    ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅವರ ಭಾರತೀಯ ಮೂಲದ ಪತ್ನಿ ಉಷಾ ವ್ಯಾನ್ಸ್ ಅವರು ಸೋಮವಾರ ನವದೆಹಲಿಗೆ ಆಗಮಿಸುತ್ತಿರುವ ಹಿನ್ನೆಲೆ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ವ್ಯಾನ್ಸ್, ಅವರ ಪತ್ನಿ ಉಷಾ ಮತ್ತು ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಿರಾಬೆಲ್ ಅವರು ಸೋಮವಾರ ಬೆಳಗ್ಗೆ 10 ಗಂಟೆಗೆ ದೆಹಲಿಯ ಪಾಲಮ್ ವಾಯುನೆಲೆಯಲ್ಲಿ ಇಳಿಯಲಿದ್ದಾರೆ. ಇವರ ನಾಲ್ಕು ದಿನಗಳ ಭಾರತ ಭೇಟಿಗಾಗಿ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ

   “ಅಮೆರಿಕ ಉಪಾಧ್ಯಕ್ಷರ ಉನ್ನತ ಮಟ್ಟದ ಭೇಟಿಗಾಗಿ ಭದ್ರತಾ ಪ್ರೋಟೋಕಾಲ್ ಪ್ರಕಾರ ನಾವು ಮಾದರಿ ಕವಾಯತುಗಳನ್ನು ಈಗಾಗಲೇ ನಡೆಸಿದ್ದೇವೆ. ದೆಹಲಿಯ ವಿವಿಧ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಲ್ಲವೂ ಸುಗಮವಾಗಿ ನಡೆಯಲಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ದೆಹಲಿ ಟ್ರಾಫಿಕ್ ಪೊಲೀಸರು ಕೂಡ ಜೆಡಿ ವ್ಯಾನ್ಸ್ ಅವರ ಪ್ರಯಾಣವು ನಗರದಾದ್ಯಂತ ಸುಗಮವಾಗಿರುವಂತೆ ಹಾಗೂ ಯಾವುದೇ ಅಡೆತಡೆಗಳು ಎದರುರಾಗದಂತೆ ಈಗಾಗಲೇ ಸಂಪೂರ್ಣ ವ್ಯವಸ್ಥೆ ಮಾಡಿದ್ದಾರೆ. 

   ದೆಹಲಿಯಲ್ಲಿ ಇಳಿದ ನಂತರ, ವ್ಯಾನ್ಸ್ ಮತ್ತು ಅವರ ಕುಟುಂಬವು ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ, ಸಾಂಪ್ರದಾಯಿಕ ಭಾರತೀಯ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ವಾಣಿಜ್ಯ ಸಂಕೀರ್ಣಕ್ಕೂ ತೆರಳಲಿದ್ದಾರೆ. “ಅಮೆರಿಕ ಉಪಾಧ್ಯಕ್ಷರು ಸೋಮವಾರ ಸಂಜೆ ಭೇಟಿ ನೀಡಲಿರುವ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯದಲ್ಲಿ ನಾವು ಮೊದಲೇ ಭದ್ರತಾ ವ್ಯವಸ್ತೆಯನ್ನು ಕಲ್ಪಿಸಿದ್ದೇವೆ. ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ ಮತ್ತು ಭೇಟಿಯ ದಿನ ನಮ್ಮ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗುವುದು,” ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. 

   ವ್ಯಾನ್ಸ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಅವರ ಅಧಿಕೃತ ನಿವಾಸದಲ್ಲಿ ಏರ್ಪಡಿಸಿರುವ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಈ ಔತಣಕೂಟಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಹಲವಾರು ಕೇಂದ್ರ ಸಚಿವರು ಮತ್ತು ಹಿರಿಯ ಬಿಜೆಪಿ ನಾಯಕರು ಉಪಸ್ಥಿತರಿರುವ ಸಾಧ್ಯತೆಯಿದೆ.

   ವ್ಯಾನ್ಸ್ ಮತ್ತು ಅವರ ಕುಟುಂಬವು ಸೋಮವಾರ ರಾತ್ರಿ ದೆಹಲಿಯಿಂದ ಜೈಪುರ ಮತ್ತು ಆಗ್ರಾಗೆ ಪ್ರಯಾಣಿಸಲಿದ್ದಾರೆ. ಏಪ್ರಿಲ್ 22 ರಂದು, ಅವರು ಜೈಪುರದ ಅಂಬೇರ್ ಕೋಟೆ, ಜಂತರ್ ಮಂತರ್, ಸಿಟಿ ಪ್ಯಾಲೇಸ್ ಮತ್ತು ಹವಾ ಮಹಲ್‌ಗೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 23 ರಂದು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅವರ ಕುಟುಂಬವು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಲಿದೆ.