ಪೊಸ್ಟರ್‌ ರಾಜಕೀಯ : ಪೊಲೀಸರಿಗೆ ವಾರ್ನಿಂಗ್‌ ಕೊಟ್ಟ ಜೆಡಿಎಸ್‌…..!

ಬೆಂಗಳೂರು:

     ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಪೋಸ್ಟರ್ ಪಾಲಿಟಿಕ್ಸ್ ಮಾಡುತ್ತಿದ್ದು, ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆ ತಕ್ಷಣ ಅದನ್ನು ತದೆಯದಿದ್ದರೆ ನಾವೂ ಅದೇ ದಾರಿ ತುಳಿಯಬೇಕಾಗುತ್ತದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಅವರು ಈ ಎಚ್ಚರಿಕೆ ನೀಡಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಜಿ ಶಾಸಕ ಅಶ್ವಿನ್ ಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರ ಜತೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು ಅವರು.

    ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಪೋಸ್ಟರ್ ಪಾಲಿಟಿಕ್ಸ್ ಮೂಲಕ ಅಪಪ್ರಚಾರ ಮಾಡಿ ತೇಜೊವಧೆ ಮಾಡುವ ಕೆಲಸ ಮಾಡುತ್ತಿದೆ. ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿರುವುದಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಎ.ಮಂಜುನಾಥ್ ತಿಳಿಸಿದರು. ಕಾಂಗ್ರೆಸ್ ಪಕ್ಷದವರು ಬಿಜೆಪಿ ಸರಕಾರದ ಸಮಯದಲ್ಲಿ ಪೇ ಸಿಎಂ ಪೋಸ್ಟರ್‌ಗಳನ್ನು ರಾತ್ರೋರಾತ್ರಿ ಅಂಟಿಸಿದರು.

    ಈಗ ಜನಪರ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಿರುವ ಕುಮಾರಸ್ವಾಮಿ ಅವರ ಬಗ್ಗೆ ಅಶ್ಲೀಲ, ಕೀಳು ಅಭಿರುಚಿಯ ಪೋಸ್ಟರ್ ಅಂಟಿಸಿದರೆ ಮೇಲುಗೈ ಸಾಧಿಸುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ನಾವು ಕಾಂಗ್ರೆಸ್ ನವರ ಪೋಸ್ಟರ್‌ಗಳನ್ನು ಅಂಟಿಸುವುದು ದೊಡ್ಡ ವಿಚಾರವಲ್ಲ. ಅವರು ಒಂದು ಮಾಡಿದರೆ ಹತ್ತು ಮಾಡುವ ಶಕ್ತಿ ನಮಗೂ ಕೂಡ ಇದೆ. ಇದು ಯಾವುದು ಕೂಡ ರಾಜಕಾರಣದಲ್ಲಿ ಶಾಶ್ವತ ಅಲ್ಲ ಎಂದು ಎಚ್ಚರಿಕೆ ನೀಡಿದರು.

    ನಾವು ಗೃಹ ಇಲಾಖೆಗೆ ಎಚ್ಚರಿಕೆ ನೀಡುತ್ತಿದ್ದೇವೆ. ಪೊಲೀಸ್ ಮಹಾನಿರ್ದೇಶಕರಿಗೂ ಸಹ ಮನವಿ ಮಾಡುತ್ತೇವೆ. ಇದಕ್ಕೆಲ್ಲಾ ಕಡಿವಾಣ ಹಾಕುವ ಕೆಲಸ ಮಾಡಬೇಕು. ವಿದ್ಯುತ್ ವಿಚಾರವಾಗಿ ಕುಮಾರಸ್ವಾಮಿಯವರ ವಿರುದ್ದ ಪೊಸ್ಟರ್ ಅಂಟಿಸಿದ್ದಾಗ ಗೃಹ ಇಲಾಖೆ ಏನು ಮಾಡುತ್ತಿತ್ತು? ಮತ್ತೆ ಪೋಸ್ಟರ್ ಅಂಟಿಸಿದ್ದಾರೆ. ಹೀಗೆ ಮುಂದುವರೆದರೆ ಹಾದಿಬೀದಿಯಲ್ಲಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯುವ ಪರಿಸ್ಥಿತಿ ಸೃಷ್ಟಿ ಆಗುತ್ತದೆ.

     ಅಂತಹ ಪರಿಸ್ಥಿತಿ ಸೃಷ್ಟಿಯಾದರೆ ಸರಕಾರ ಮತ್ತು ಪೊಲೀಸ್ ಇಲಾಖೆಯೇ ಹೊಣೆ ಆಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ನವರು ದುಡ್ಡಿದೆ ಅನ್ನುವ ಕಾರಣಕ್ಕೆ ಒಂದು ಏಜೆನ್ಸಿ ಫಿಕ್ಸ್ ಮಾಡಿಕೊಂಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ನಮಗೂ ಸಹ ಇದೆ. ಪೋಲಿಸ್ ಇಲಾಖೆ ಇದಕ್ಕೆ ಕಡಿವಾಣ ಹಾಕದಿದ್ದರೆ ನಾಳೆಯಿಂದ ನಮ್ಮಿಂದಲೂ ಪೋಸ್ಟರ್ ರಾಜಕೀಯ ಶುರುವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರಲ್ಲದೆ, ಗೃಹ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಕಾಂಗ್ರೆಸ್‌ನ ಎಲ್ಲಾ ನಾಯಕರು ಇದರಲ್ಲಿ ಭಾಗಿಯಾಗಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಅವರ ಹಿಂಬಾಲಕರು ಇದನ್ನು ಮಾಡುತ್ತಿದ್ದಾರೆ. ಗೃಹ ಇಲಾಖೆ ಕಡಿವಾಣ ಹಾಕಲಿಲ್ಲ ಅಂದರೆ ಇದಕ್ಕಿಂತ ವಿಚಿತ್ರವಾಗಿ ಪೋಸ್ಟರ್ ಚಳವಳಿ ನಡೆಯುತ್ತದೆ. ರಾಜ್ಯದ ಜನತೆಗೆ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ತಿಳಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಮಾಡಿದೆಲ್ಲಾ ಸರಿಯಾಗಿದ್ದರೆ ಈ ರೀತಿ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದರು.

    ಪೋಸ್ಟರ್ ಅಂಟಿಸಲು ನಮ್ಮಲ್ಲೂ ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ. ಕಾಂಗ್ರೆಸ್ ಮಾಡಿದ್ದನ್ನೇ ನಾವು ಮಾಡುತ್ತೇವೆ ಎಂದ ಅವರು; ಡಿಸೆಂಬರ್ 4ರಿಂದ ಬೆಳಗಾವಿ ಅಧಿವೇಶನ ಶುರುವಾಗುತ್ತಿದೆ. ಕುಮಾರಸ್ವಾಮಿ ಅವರ ಆರೋಪಗಳಿಗೆ ಸರಕಾರ ಸದನದಲ್ಲಿ ಉತ್ತರ ನೀಡಲಿ. ಜೆಡಿಎಸ್ ನಾಯಕರು ಗಾಜಿನ ಮನೆಯಲ್ಲಿಲ್ಲ ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

     ಪೋಸ್ಟರ್ ಅಂಟಿಸಬೇಡಿ ಎಂದು ಹೈಕೋರ್ಟ್ ಸ್ಪಷ್ಟ ಆದೇಶವಿದೆ. ಪೊಲೀಸ್ ಇಲಾಖೆ ಕೈಕಟ್ಟಿ ಕೂತಿದೆಯಾ? ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಪೇ ಸಿಎಂ ಕ್ಯು ಆರ್ ಇರುವ ಪೋಸ್ಟರ್ ಅಂಟಿಸಿದರು. ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಪರವಾಗಿ ಸ್ಮಾರ್ಟ್ ಕಾರ್ಡ್ಗಳನ್ನ ನೀಡಿದ್ದ ಏಜೆನ್ಸಿ, ಇವತ್ತು ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿದೆ. ಆ ತರಹದ ಏಜೆನ್ಸಿಗಳನ್ನ ಇಟ್ಟುಕೊಂಡು ಕೆಟ್ಟ ಕೆಲಸ ಮಾಡುವುದು ಸರಿಯಲ್ಲ. ನಾವು ಇದೇ ರೀತಿ ಮಾಡಿದರೆ ಏನಾಗುತ್ತದೆ ಯೋಚಿಸಿ ಎಂದು ಆಕ್ರೋಶ ಹೊರಹಾಕಿದರು.

     ಪುಂಡರನ್ನ ಪುಡಾರಿಗಳನ್ನ ಇಟ್ಟುಕೊಂಡು ಪೋಸ್ಟರ್ ಅಂಟಿಸುವುದು ಮಾಡಿದರೆ ಸರಿ ಇರಲ್ಲ ಎಂದು ಅವರು ನೇರ ಎಚ್ಚರಿಕೆ ನೀಡಿದರು. ಕುಮಾರಸ್ವಾಮಿ ಅವರು ದಾಖಲೆ ಇಟ್ಟಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು; ಕುಮಾರಸ್ವಾಮಿ ಯಾವುದೇ ವಿಚಾರ ಮಾತನಾಡಿದರೂ ದಾಖಲೆ ಇಟ್ಟುಕೊಂಡು ಮಾತನಾಡಿದ್ದಾರೆ.ನಮ್ಮ ನಾಯಕರು ಮಾತನಾಡಿದರೆ ಕಾಂಗ್ರೆಸ್‌ನವರು ಯಾಕೆ ಹೆದರುತ್ತಾರೆ.ಕುಮಾರಸ್ವಾಮಿ ಬಹಳಷ್ಟು ದಾಖಲೆಗಳನ್ನ ತೋರಿಸಿಯೇ ಮಾತನಾಡುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap