ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಜೆಡಿಎಸ್‌…!

ಬೆಂಗಳೂರು

     ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮೂರೂ ರಾಜಕೀಯ ಪಕ್ಷಗಳು ಕಸರತ್ತು ನಡೆಸಿದ್ದು ಆಡಳಿತಾರೂಢ ಬಿಜೆಪಿಯ ಮೊದಲ ಕಂತಿನ ಪಟ್ಟಿ 8 ರಂದು,ಕಾಂಗ್ರೆಸ್‌ನ ಎರಡನೇ ಕಂತಿನ ಪಟ್ಟಿ 5 ರಂದು ಬಿಡುಗಡೆಯಾಗಲಿದ್ದು ಜೆಡಿಎಸ್‌ನ ಎರಡನೇ ಕಂತಿನ ಪಟ್ಟಿ ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

    ಟಿಕೆಟ್ ಹಂಚಿಕೆಯಾದ ತಕ್ಷಣವೇ ಪಕ್ಷದಿಂದ ಹಲ ಶಾಸಕರು ಮತ್ತು ನಾಯಕರು ವಲಸೆ ಹೋಗಬಹುದು ಎಂಬ ಆತಂಕದಲ್ಲಿರುವ ಆಡಳಿತಾರೂಢ ಬಿಜೆಪಿ,ಇದೇ ಕಾರಣಕ್ಕಾಗಿ ಮೊದಲ ಕಂತಿನ ಪಟ್ಟಿಯನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ.

    ಕಣಕ್ಕಿಳಿಸುವ ಅಭ್ಯರ್ಥಿಗಳನ್ನು ನಿರ್ಧರಿಸಲು ಜಿಲ್ಲಾ ಮಟ್ಟದಲ್ಲಿ ಕಸರತ್ತು ನಡೆಸಿರುವ ಬಿಜೆಪಿ ವರಿಷ್ಟರಿಗೆ,ಹಾಲಿ ಶಾಸಕರ ಪೈಕಿ ಐದು ಮಂದಿ ಮಂತ್ರಿಗಳು ಸೇರಿದಂತೆ ಒಟ್ಟು 28 ಜನ ಸೋಲಲಿದ್ದಾರೆ ಎಂಬ ವರದಿ ದಕ್ಕಿದೆ.

    ಆದರೆ ಇವರಿಗೆ ಟಿಕೆಟ್ ತಪ್ಪಿಸಿ ಬೇರೆಯವರಿಗೆ ಟಿಕೆಟ್ ನೀಡಿದರೆ,ಇದೇ ಕಾರಣಕ್ಕಾಗಿ ಮುನಿಸಿಕೊಂಡು ಅವರು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದ ಕಡೆ ಹೋಗಬಹುದು ಎಂಬ ಆತಂಕವೂ ಶುರು ಆಗಿದೆ.

    ಹೀಗೆ ಬೇರೆ ಪಕ್ಷಗಳ ಕಡೆ ವಲಸೆ ಹೋಗುವ ಶಾಸಕರು ಮತ್ತು ನಾಯಕರು,ಆ ಪಕ್ಷದ ಮೂಲ ಮತಗಳನ್ನು ಪಡೆದು ಗೆಲುವು ಪಡೆದರೂ ಅಚ್ಚರಿಯಿಲ್ಲ ಎಂಬ ಆತಂಕದಲ್ಲಿರುವ ಬಿಜೆಪಿ ಇದೇ ಕಾರಣಕ್ಕಾಗಿ ತನ್ನ ಮೊದಲ ಕಂತಿನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿಲ್ಲ.

    ಈ ಮಧ್ಯೆ ಬೆಂಗಳೂರಿನಲ್ಲಿAದು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಮೊದಲ ಕಂತಿನ ಅಭ್ಯರ್ಥಿಗಳ ಪಟ್ಟಿಯನ್ನು ಏಪ್ರಿಲ್ 8 ರಂದು ಬಿಡುಗಡೆ ಮಾಡುವುದಾಗಿ ವಿವರಿಸಿದರು.

   ಈ ಮಧ್ಯೆ ತನ್ನ 124 ಮಂದಿ ಅಭ್ಯರ್ಥಿಗಳ ಮೊದಲ ಕಂತಿನ ಪಟ್ಟಿಯನ್ನು ಬಿಡುಗಡೆ ಮಾಡಿರುವ ಪ್ರಮುಖ ವಿಪಕ್ಷ ಕಾಂಗ್ರೆಸ್‌ನ ನಾಯಕರು,ಇಂದು ದಿಲ್ಲಿಗೆ ದೌಡಾಯಿಸಿದ್ದು,ಮಂಗಳವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ,ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಜತೆ ಚರ್ಚಿಸಲಿದ್ದಾರೆ. ಕೈ ಪಾಳಯದ ಮೂಲಗಳ ಪ್ರಕಾರ,ಮೊದಲ ಕಂತಿನ ಪಟ್ಟಿಯನ್ನು ಸಣ್ಣ ಪುಟ್ಟ ಗೊಂದಲಗಳೊAದಿಗೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಪಕ್ಷ,ಇದೀಗ ಎರಡನೇ ಕಂತಿನ ಪಟ್ಟಿಯನು ಬಿಡುಗಡೆ ಮಾಡುವ ವಿಷಯದಲ್ಲಿ ಸಂಘರ್ಷ ನೋಡುವಂತಾಗಿದೆ.

    ಈ ಬಾರಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪೈಪೋಟಿ ಆರಂಭಿಸಿದ್ದು,ಇದರ ಫಲವಾಗಿ ಎರಡನೇ ಕಂತಿನ ಕೈ ಪಟ್ಟಿ ಹೊರಬರುವುದು ಕಷ್ಟವಾಗುತ್ತಿದೆ.

    ಇದೇ ಕಾರಣಕ್ಕಾಗಿ ಮಂಗಳವಾರ ಪಕ್ಷದ ಹೈಕಮಾಂಡ್ ವರಿಷ್ಟರು ಟಿಕೆಟ್ ಹಂಚಿಕೆ ಗೊಂದಲವನ್ನು ಪರಿಹರಿಸಿ ಎರಡನೇ ಕಂತಿನ ಪಟ್ಟಿಯನ್ನು ಪ್ರಕಟಿಸಲು ಕಸರತ್ತು ನಡೆಸಲಿದ್ದಾರೆ ಉಳಿದಂತೆ ದೇವೇಗೌಡ-ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜಾತ್ಯಾತೀತ ಜನತಾದಳದ ಎರಡನೇ ಕಂತಿನ ಪಟ್ಟಿ ಬಹುತೇಕ ಸಿದ್ಧವಾಗಿದ್ದು ಯಾವುದೇ ಕ್ಷಣದಲ್ಲಿ ಹೊರಬೀಳಲಿದೆ.

   ಆದರೆ ಭಾರೀ ಕುತೂಹಲ ಕೆರಳಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ವಿಷಯದಲ್ಲಿ ಗೊಂದಲ ಮುಂದುವರಿದಿದ್ದು,ತಮ್ಮ ಪತ್ನಿ ಶ್ರೀಮತಿ ಭವಾನಿ ಅವರಿಗೆ ಟಿಕೆಟ್ ನೀಡಬೇಕು ಎಂದು ಹೆಚ್.ಡಿ.ರೇವಣ್ಣ ಪಟ್ಟು ಹಿಡಿದಿದ್ದರೆ,ಸ್ವರೂಪ್ ಅವರಿಗೆ ಟಿಕೆಟ್ ಕೊಟ್ಟೇ ಕೊಡುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ.

    ಈ ಸಂಘರ್ಷ ಇಂದು ತೀವ್ರ ಮಟ್ಟಕ್ಕೆ ಹೋಗಿದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ನಡೆದ ಸಂಧಾನವೂ ವಿಫಲವಾಗಿರುವುದರಿಂದ ಭವಾನಿ ರೇವಣ್ಣ ಅವರು ಬಂಡೇಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

    ಶ್ರೀಮತಿ ಭವಾನಿ ರೇವಣ್ಣ ಅವರ ಪುತ್ರ,ಸಂಸದ ಪ್ರಜ್ವಲ್ ರೇವಣ್ಣ ಅವರು ಒಂದು ಹೆಜ್ಜೆ ಮುಂದೆ ಹೋಗಿ,ಪಕ್ಷದ ಟಿಕೆಟ್ ಸಿಗದಿದ್ದರೂ ನಮ್ಮ ತಾಯಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಗುಡುಗಿದ್ದಾರೆ.ಈ ಬೆಳವಣಿಗೆ ಜೆಡಿಎಸ್ ಪಕ್ಷ ಸಣ್ಣ ಮಟ್ಟದಲ್ಲಿ ಹೋಳಾಗಲು ಕಾರಣವಾಗಬಹುದೇ ಎಂಬ ಆತಂಕಕ್ಕೆ ಕಾರಣವಗಿದ್ದು,ಒಂದು ವೇಳೆ ಭವಾನಿ ರೇವಣ್ಣ ಬಂಡಾಯವೇಳುವ ಹಂತಕ್ಕೆ ಹೋದರೆ ಅವರನ್ನು ಪಕ್ಷದಿಂದ ಹೊರಹಾಕಲು ಕುಮಾರಸ್ವಾಮಿ ಯೋಚಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ವಿವರ ನೀಡಿವೆ.

    ಪಕ್ಷದ ಕಾರ್ಯಕರ್ತರನ್ನು ಹೊರತುಪಡಿಸಿ ಕುಟುಂಬದವರಿಗೆ ಟಿಕೆಟ್ ನೀಡಿದರೆ ಅದರಿಂದ ವ್ಯತಿರಿಕ್ತ ಸಂದೇಶ ರವಾನೆಯಾಗುತ್ತದೆ ಎಂದು ತಂದೆ ದೇವೇಗೌಡರಿಗೆ ವಿವರಿಸಿರುವ ಕುಮಾರಸ್ವಾಮಿ ,ಅವರಿಂದಲೂ ಸ್ವರೂಪ್ ಗೆ ಟಿಕೆಟ್ ಕೊಡಿಸಲು ಒಪ್ಪಿಗೆ ಕೊಡಿಸಿದ್ದಾರೆಂದು ಹೇಳಲಾಗುತ್ತಿದೆ.

    ಆದರೆ ಹಾಸನ ಟಿಕೆಟ್ ವಿಷಯ ಕ್ಷಣಕ್ಷಣಕ್ಕೂ ಕೋಲಾಹಲಕಾರಿ ತಿರುವು ಪಡೆಯುತ್ತಿದ್ದು,ಇದರ ಮಧ್ಯೆಯೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಎರಡನೇ ಕಂತಿನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಕುಮಾರಸ್ವಾಮಿ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap