ವಾಷಿಂಗ್ಟನ್:
ಅಕ್ರಮ ಬಂದೂಕು ಖರೀದಿಸಿದ್ದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಪುತ್ರ ಹಂಟರ್ ಬೈಡನ್ ಕ್ಷಮಾಪಣೆ ನೀಡುವ ಪತ್ರಕ್ಕೆ ಭಾನುವಾರ ಜೋ ಬೈಡನ್ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಹಂಟರ್ ಬೈಡನ್ ಅಕ್ರಮವಾಗಿ ಬಂದೂಕು ಖರೀದಿ ಹಾಗೂ ತೆರಿಗೆ ವಂಚನೆಯಲ್ಲಿ ಪಾಲ್ಗೊಂಡಿದ್ದು ಶಿಕ್ಷೆ ಎದುರಿಸುತ್ತಿದ್ದಾರೆ. ಕ್ಷಮಾಪಣ ಪತ್ರಕ್ಕೆ ಸಹಿ ಹಾಕಿದ ಬೈಡನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂದು, ನಾನು ನನ್ನ ಮಗ ಹಂಟರ್‌ಗೆ ಕ್ಷಮಾದಾನಕ್ಕೆ ಸಹಿ ಹಾಕಿದ್ದೇನೆ” ಎಂದು ತಿಳಿಸಿದ್ದಾರೆ. ನಾನು ಅಧಿಕಾರ ವಹಿಸಿಕೊಂಡ ದಿನದಿಂದ, ನಾನು ನ್ಯಾಯಾಂಗ ಇಲಾಖೆಯ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದೆ. ಅದೇ ರೀತಿ ನಡೆದುಕೊಂಡಿದ್ದೇನೆ ಕೂಡ ಎಂದು ಹೇಳಿದ್ದಾರೆ.
ಈ ಮೊದಲು ಜೂನ್‌ನಲ್ಲಿ ಜೋ ಬೈಡನ್ ಕ್ಷಮಾದಾನ ನೀಡುವ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. “ನಾನು ತೀರ್ಪುಗಾರರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ನಾನು ಅದನ್ನು ಮಾಡುತ್ತೇನೆ ಮತ್ತು ನಾನು ಅವನನ್ನು ಕ್ಷಮಿಸುವುದಿಲ್ಲ” ಎಂದು ಹೇಳಿದ್ದರು.
ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಿರುವ ರಿಪಬ್ಲಿಕನ್ ಪಕ್ಷದ ಸದಸ್ಯರು, ಹಂಟರ್ ಬೈಡನ್ ವಿದೇಶಗಳಲ್ಲಿ ಹೂಡಿಕೆ ಮಾಡಿರುವ ವ್ಯವಹಾರಗಳಲ್ಲಿ ಜೋ ಬೈಡನ್ ಕೂಡ ಪಾಲು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಈ ಹಿಂದೆ ಬೈಡನ್ ಪುತ್ರನ ವಿರುದ್ಧ ಆತ ಒಬ್ಬ ಮಾದಕ ವ್ಯಸನಿಯಾಗಿದ್ದು, ಆತನನ್ನು ಕ್ಷಮಿಸುವುದಾಗಲಿ ಅಥವಾ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದ್ದರು.
ಕೆಲ ವರ್ಷದ ಹಿಂದೆ ಅಕ್ರಮವಾಗಿ ಬಂದೂಕು ಖರೀದಿ ಮಾಡಿದ್ದರು ಎಂದು ಹಂಟರ್ ಬೈಡನ್ ವಿರುದ್ಧ 2023ರಲ್ಲಿ ದೋಷಾರೋಪ ಹೊರಿಸಲಾಗಿತ್ತು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ತಾನು ಡ್ರಗ್ಸ್ ತೆಗೆದುಕೊಳ್ಳುತ್ತಿಲ್ಲ ಎಂದು ಸುಳ್ಳು ಹೇಳಿದ್ದರು. ಆದರೆ ವೈದ್ಯಕೀಯ ಪರೀಕ್ಷೆಯಿಂದ ಅವರು ಡ್ರಗ್ಸ್ ತೆಗೆದು ಕೊಳ್ಳುತ್ತಾರೆ ಎಂದು ಸಾಬೀತಾಗಿತ್ತು. ನಂತರ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
