ಜಿಂದಾಲ್‌ ಅವಘಡ : FIRನಲ್ಲಿ ಅಧಿಕಾರಿಗಳ ಹೆಸರೇ ನಾಪತ್ತೆ….!?

ಳ್ಳಾರಿ: 

     ‘ಜಿಂದಾಲ್‌ ಸ್ಟೀಲ್‌ ಲಿಮಿಟೆಡ್‌’ನಲ್ಲಿ ಗುರುವಾರ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಎಚ್‌ಎಸ್‌ಎಂ-03 ಘಟಕದ ಉಸ್ತುವಾರಿ ಉಪಾಧ್ಯಕ್ಷ ಸೇರಿದಂತೆ ಆರು ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗಿದೆ.ದುರಂತದಲ್ಲಿ ಸಾವಿಗೀಡಾಗಿದ್ದ ಹೊಸಪೇಟೆಯ ಭುವನಹಳ್ಳಿಯ ಗಂಟೆ ಜಡಿಯಪ್ಪ ಅವರ ತಮ್ಮ ಮಹೇಂದ್ರ ಅವರು ಘಟನೆಗೆ ಸಂಬಂಧಿಸಿದಂತೆ ತೋರಣಗಲ್‌ ಪೋಲಿಸ್‌ ಠಾಣೆಗೆ ದೂರು ನೀಡಿದ್ದಾರೆ.

    ದೂರು ಆಧರಿಸಿ, ಎಚ್‌ಎಸ್‌ಎಂ-3 ಘಟಕದ ಉಸ್ತುವಾರಿ ಉಪಾಧ್ಯಕ್ಷ, ಸುರಕ್ಷತೆ ವಿಭಾಗದ ಎವಿಪಿ, ಸುರಕ್ಷತೆ ವಿಭಾಗದ ವ್ಯವಸ್ಥಾಪಕ, ಸಿವಿಲ್ ವಿಭಾಗದ ಅಧಿಕಾರಿ, ಸುರಕ್ಷತೆ ವಿಭಾಗದ ಸೂಪರ್‌ವೈಸರ್, ಮೆಕಾನಿಕಲ್ ವಿಭಾಗದ ಉಸ್ತುವಾರಿ ಅಧಿಕಾರಿ ಸೇರಿದಂತೆ ಆರು ಅಧಿಕಾರಿಗಳ ವಿರುದ್ಧ ಐಪಿಸಿಯ ಸೆಕ್ಷನ್‌ 304(ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಪ್ರಕರಣ ದಾಖಲಿಸಲಾಗಿದೆ. ಆದರೆ, ಎಫ್‌ಐಆರ್‌ನಲ್ಲಿ ಯಾವ ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿಲ್ಲ.

    ಮೃತ ಜಡಿಯಪ್ಪಗೆ ಒಂದು ವರ್ಷದ ಹಿಂದೆ ಕಂಪ್ಲಿ ವಾಸಿ ರಮೇಶಪ್ಪ ಎಂಬುವವರ ಪುತ್ರಿ ಸಂಧ್ಯಾ ರವರೊಂದಿಗೆ ಮದುವೆ ಮಾಡಲಾಗಿತ್ತು. ಸಂಧ್ಯಾ ಗರ್ಭಿಣಿ ಎಂಬ ಅಂಶವನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಜಡಿಯಪ್ಪನು 5 ವರ್ಷಗಳಿಂದ ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. 

   ಕಾರ್ಯನಿರತ ಮೂರು ಜನ ಯುವ ಎಂಜಿನಿಯರ್‌ಗಳ ಸಾವಿಗೆ ಕಾರಣರಾದ ಜಿಂದಾಲ್ ಕಾರ್ಖಾನೆಯ ಅಧ್ಯಕ್ಷ ಪಿ.ಕೆ.ಮುರುಗನ್, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಸಂಜಯ್ ಹಂಡೂರಾ ಅವರ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ಸಿಐಟಿಯುನ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ,ಚೆನ್ನಬಸಯ್ಯಸ್ವಾಮಿ ಅವರು ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

  ‘ಜಿಂದಾಲ್ ನ ಎಚ್‍ಎಸ್‍ಎಂ ನೂತನ ಘಟಕದಲ್ಲಿ ನೀರು ಹರಿಸುವ ಪೈಪ್ ಲೈನ್ ಸುರಂಗದ ದುರಸ್ತಿ ಕಾರ್ಯ ಮಾಡುವಾಗ ಹೊಸಪೇಟೆ ತಾಲ್ಲೂಕಿನ ಜಡೆಪ್ಪ (31) ಚೆನೈ ಮೂಲದ ಮಹಾದೇವನ್ (22), ಬೆಂಗಳೂರು ಮೂಲದ ಸುಶಾಂತ್ (23) ಈ ಮೂರು ಜನರು ನೌಕರರು ಜಿಂದಾಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯತನ ದಿಂದ ಮೃತರಾಗಿದ್ದಾರೆ.

    ಜಿಂದಾಲ್ ಕೈಗಾರಿಕೆಯಲ್ಲಿ ಕಾರ್ಮಿಕರ ಅಪಘಾತ ಸಾವುಗಳು ನಿರಂತರವಾಗಿ ನಡೆಯುತ್ತಿದ್ದು, ಕೈಗಾರಿಕಾ ಸುರಕ್ಷತೆ, ಪರಿಸರ ಇಲಾಖೆಯ ಅಧಿಕಾರಿಗಳು ಜಿಂದಾಲ್ ಕಂಪನಿಯ ಕೈಗೊಂಬೆಗಳಾಗಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

    ‘ಕೈಗಾರಿಕಾ ಅಪಘಾತಗಳನ್ನು ಸಾಮಾನ್ಯ ಅಪಘಾತಗಳಂತೆ ಪರಿಗಣಿಸಿ ಮುಚ್ಚಿ ಹಾಕಲಾಗುತ್ತಿದೆ. ಹಲವು ಅಪಘಾತ ಸಾವುಗಳು ಬೆಳಕಿಗೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಅಪಘಾತಗಳ ಮರಣೋತ್ತರ ಪರೀಕ್ಷೆಗಳು ಸಹ ಕಂಪನಿಗಳ ನಿರ್ದೇಶನದಂತೆ ನಡೆಯುತ್ತಿದ್ದು, ಮೃತ ಕಾರ್ಮಿಕರಿಗೆ ಪರಿಹಾರ ನೀಡುವಲ್ಲಿಯೂ ಅನ್ಯಾಯ ಮಾಡಲಾಗುತ್ತಿದೆ. ಜಿಂದಾಲ್ ನಲ್ಲಿ ಇದುವರೆಗೂ ನಡೆದ ಅಪಘಾತಗಳ ಸಾವುಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕು. ಮೃತ ಕುಟುಂಬಗಳಿಗೆ ಅಗತ್ಯ ಪರಿಹಾರ, ಉದ್ಯೋಗ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap