ಧೋನಿಯ ದಾಖಲೆ ಮುರಿದ ಆರ್‌ಸಿಬಿಯ ಜಿತೇಶ್‌ ಶರ್ಮ

ಲಕ್ನೋ:

    ಲಕ್ನೋ ಸೂಪರ್‌ ಜೈಂಟ್ಸ್‌  ವಿರುದ್ಧದ ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿ ಆರ್‌ಸಿಬಿಗೆ ಅಸಾಮಾನ್ಯ ಗೆಲುವು ತಂದುಕೊಟ್ಟ ಹಂಗಾಮಿ ನಾಯಕ ಜಿತೇಶ್‌ ಶರ್ಮ ಅವರು ತಮ್ಮ ಈ ಇನಿಂಗ್ಸ್‌ ಮೂಲಕ ಮಹೇಂದ್ರ ಸಿಂಗ್‌ ಧೋನಿಯ 7 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ.

   ಚೇಸಿಂಗ್‌ ವೇಳೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಜಿತೇಶ್‌ ಶರ್ಮ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಒಟ್ಟು 33 ಎಸೆತ ಎದುರಿಸಿದ ಅವರು ಬರೋಬ್ಬರಿ 8 ಬೌಂಡರಿ ಮತ್ತು 6 ಸಿಕ್ಸರ್‌ ಸಿಡಿಸಿ ಅಜೇಯ 85 ರನ್‌ ಬಾರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಯಶಸ್ವಿ ರನ್-ಚೇಸಿಂಗ್‌ ವೇಳೆ 6ನೇ ಸ್ಥಾನ ಅಥವಾ ಅದಕ್ಕಿಂತ ಕೆಳಗಿನ ಸ್ಥಾನದಲ್ಲಿ ಬ್ಯಾಟಿಂಗ್‌ ನಡೆಸಿ ಅತ್ಯಧಿಕ ರನ್‌ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ತಂಡದ ಎಂ.ಎಸ್‌ ಧೋನಿ ಹೆಸರಿನಲ್ಲಿತ್ತು. ಧೋನಿ 2018 ರಲ್ಲಿ ಆರ್‌ಸಿಬಿ ವಿರುದ್ಧ ಅಜೇಯ 70 ರನ್‌ ಬಾರಿಸಿದ್ದರು.

   ಜಿತೇಶ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್ ಮುರಿಯದ ಐದನೇ ವಿಕೆಟ್‌ಗೆ 107* ರನ್‌ಗಳ ಜತೆಯಾಟ ನಡೆಸುವ ಮೂಲಕ ಆರ್‌ಸಿಬಿ ಪರ 5ನೇ ವಿಕೆಟ್ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್‌ಗೆ ಅತ್ಯಧಿಕ ಮೊತ್ತದ ಜತೆಯಾಟ ನಡೆಸಿದ ಜೋಡಿ ಎನಿಸಿಕೊಂಡಿತು. ಇದಕ್ಕೂ ಮುನ್ನ ಈ ದಾಖಲೆ ಎಬಿ ಡಿವಿಲಿಯರ್ಸ್ ಮತ್ತು ಇಕ್ಬಾಲ್ ಅಬ್ದುಲ್ಲಾ(91* ರನ್‌) ಜೋಡಿ ಹೆಸರಿನಲ್ಲಿತ್ತು. ಈ ಜೋಡಿ 2016 ರ ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಈ ಜತೆಯಾಟ ನಡೆಸಿದ್ದರು. 

   ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 3 ವಿಕೆಟಿಗೆ 227 ರನ್‌ ಪೇರಿಸಿದರೆ, ಆರ್‌ಸಿಬಿ ತಂಡವು ಈ ಬೃಹತ್‌ ಮೊತ್ತವನ್ನು 18.4 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ ನಷ್ಟಕ್ಕೆ 230 ರನ್‌ ಬಾರಿಸಿ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಗೆಲುವಿನ ರುವಾರಿ ಜಿತೇಶ್‌ ಶರ್ಮ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Recent Articles

spot_img

Related Stories

Share via
Copy link