ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಲಿ..!!

ತುಮಕೂರು

     ಪ್ರತಿವರ್ಷ ಒಂದಲ್ಲಾ ಒಂದು ಸಮಯದಲ್ಲಿ ಮಳೆ ಬಂದೇ ಬರುತ್ತದೆ. ಮಳೆಯ ನೀರನ್ನು ಹಿಡಿದಿಟ್ಟುಕೊಂಡರೆ ಸಾಕು, ವರ್ಷಪೂರ್ತಿ ಸಾಕಾಗುವಷ್ಟು ನೀರು ಸಂಗ್ರಹಣೆ ಮಾಡಬಹುದು. ನೀರಿನ ಕೊರತೆಯನ್ನು ನೀಗಿಸಬಹುದು. ಇದಕ್ಕಾಗಿ ರೂಫ್ ವಾಟರ್ ಹಾರ್ವೆಸ್ಟಿಂಗ್ ಪದ್ಧತಿ ಕಡೆಗೆ ಗಮನ ಹರಿಸುವುದು ಒಳ್ಳೆಯದು. ಮಹಾನಗರ ಪಾಲಿಕೆ ಇದಕ್ಕೆ ಹೆಚ್ಚು ಒತ್ತು ಕೊಡಬೇಕು. ಪ್ರತಿ ಮನೆಯಲ್ಲಿಯೂ ಇದನ್ನು ಕಡ್ಡಾಯಗೊಳಿಸಬೇಕು. ಪ್ರತಿ ಮನೆ ಕಟ್ಟಡಕ್ಕೆ ಲೈಸೆನ್ಸ್ ನೀಡುವಾಗ ಮಳೆ ನೀರು ಕೊಯ್ಲು ಪದ್ಧತಿಯಂತಹ ಆಧುನಿಕ ತಂತ್ರಜ್ಞಾನದ ಬಳಕೆಗೆ ಹೆಚ್ಚು ಜಾಗೃತಿ ಮೂಡಿಸುವುದಲ್ಲದೆ, ಇದನ್ನು ಕಡ್ಡಾಯಗೊಳಿಸಬೇಕು.

     ಈಗಾಗಲೇ ಇಂತಹ ಪದ್ಧತಿಗಳು ಹಲವು ಕಡೆ ಜಾರಿಗೆ ಬಂದಿವೆ. ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿರುವ ಮನೆಗಳ ಕಡೆಗೆ ಇತರರು ಭೇಟಿ ನೀಡಿ ಅಂತಹ ಪದ್ಧತಿಗಳನ್ನು ಅಳವಡಿಸಿಕೊಂಡರೆ ಮನೆಯಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪ್ರತಿಯೊಂದಕ್ಕೂ ಇತರೆ ಮೂಲಗಳ ನೀರನ್ನೇ ಹುಡುಕುತ್ತಾ ಹೋದರೆ ಇಲ್ಲದ ನೀರನ್ನು ತರುವುದಾದರೂ ಹೇಗೆ? ಮಳೆಯ ನೀರು ಸಂಗ್ರಹಣ ಎಷ್ಟು ಮುಖ್ಯ ಎಂಬುದನ್ನು ತಿಳಿಹೇಳುವ ಕಾಳಜಿ ಎಲ್ಲರಲ್ಲೂ ಮೂಡಬೇಕು. ಆದರೆ ಭಾಷಣಗಳಿಗಷ್ಟೇ ಇದು ಸೀಮಿತವಾಗುತ್ತಿದೆ. ಅನುಷ್ಠಾನದಲ್ಲಿ ಇನ್ನೂ ದೂರ ಇದ್ದೇವೆ. ಸಂಬಂಧಿಸಿದ ಇಲಾಖೆಗಳು ಹೆಚ್ಚು ಜಾಗೃತವಾಗಬೇಕು. ನಾಗರಿಕ ಸಂಘಟನೆಗಳು ಇದಕ್ಕೆ ಒತ್ತು ನೀಡಬೇಕು.

      ನಗರಗಳಲ್ಲಿ ನೀರಿನ ಜಾಗೃತಿ ಉಂಟಾಗುತ್ತಿದ್ದು, ಇದೇ ಜಾಗೃತಿ ಗ್ರಾಮೀಣ ಪ್ರದೇಶಗಳಲ್ಲಿಯೂ ಮೂಡಬೇಕು. ನೀರಿನ ಹಲವಾರು ಸಮಸ್ಯೆಗಳಿಗೆ ಕಾರಣವಾಗಿರುವ ಪೈಕಿ ಆಧುನಿಕ ಕೃಷಿ ಪದ್ಧತಿಯೂ ಒಂದಾಗಿದೆ. ಹೆಚ್ಚು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳಿಗೆ ಮೊರೆ ಹೋದ ಪರಿಣಾಮ ಭೂಮಿಯ ಒಳಗೆ ಇರುವ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತಿವೆ. ಭೂಮಿಯಲ್ಲಿ 3 ಲಕ್ಷಕ್ಕಿಂತ ಹೆಚ್ಚು ಜೀವಾಣುಗಳು ವಾಸಿಸುತ್ತಿವೆ.

      ಆಧುನಿಕ ಕೃಷಿ ಪದ್ಧತಿಯಿಂದಾಗಿ ಇವೆಲ್ಲ ನಾಶವಾಗುತ್ತಿವೆ. ಸಗಣಿ ಹುಳ, ಎರೆ ಹುಳು, ಇರುವೆ ಮೊದಲಾದ ಜೀವಾಣುಗಳು ಭೂಮಿಯನ್ನು ರಂಧ್ರ ಮಾಡಿ ಮಳೆ ಬಂದಾಗ ನೀರು ಸುಲಭವಾಗಿ ಭೂಮಿಗೆ ಸೇರಿಕೊಳ್ಳಲು ಹಾಗೂ ಭೂಮಿಯು ಆ ನೀರನ್ನು ಸಂಗ್ರಹಿಸಿ ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗಿದೆ. ದುರಂತವೆಂದರೆ, ಆಧುನಿಕ ಕೃಷಿ ಪದ್ಧತಿಯಿಂದಾಗಿ ಈ ಜೀವಾಣುಗಳು ನಾಶವಾಗುತ್ತಾ ಭೂಮಿಯ ಫಲವತ್ತತೆಯೂ ಕಡಿಮೆಯಾಗುತ್ತಿದೆ.

       ರೈತರಿಗೆ ಈ ಬಗ್ಗೆ ಸಮಗ್ರ ತಿಳವಳಿಕೆ ನೀಡುವಲ್ಲಿ ವಿಫಲರಾಗಿದ್ದೇವೆ. ಹಿಂದೆಲ್ಲಾ ಭೂಮಿಯಲ್ಲಿ ಹೆಚ್ಚು ನೀರು ಸಂಗ್ರಹವಾಗುತ್ತಿತ್ತು. ಹಳ್ಳಕೊಳ್ಳಗಳಲ್ಲಿ ಯಾವಾಗಲೂ ನೀರು ತುಂಬಿರುತ್ತಿತ್ತು. ಈಗ ನೈಸರ್ಗಿಕ ನೀರು ಸಿಗದಂತಾಗಿದೆ. ಸುಸ್ಥಿರ ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಮಾಡಿದ್ದೇವೆ. ಸಿಮೆಂಟ್ ಕಟ್ಟಡಗಳನ್ನು ಕಟ್ಟುತ್ತಿದ್ದೇವೆ. ಇದರ ಜೊತೆಯಲ್ಲೇ ನೀರು ಇಂಗುವಂತಹ ಪದ್ಧತಿಗಳ ಕಡೆಗೆ ಗಮನ ಹರಿಸುತ್ತಿಲ್ಲ. ಭೂಮಿಯೊಳಗೆ ಪ್ಲಾಸ್ಟಿಕ್ ಮತ್ತಿತರ ಅಂಶಗಳು ಸೇರಿಕೊಂಡು ನೀರು ಇಂಗದಂತಹ ಹಾಗೂ ಇದರಿಂದ ಮತ್ತಷ್ಟು ಹಾನಿಯಾಗುವಂತಹ ಸಂದರ್ಭಗಳನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ.

       ನಮ್ಮ ಬಳಕೆಗೆ, ಕುಡಿಯುವ ನೀರಿಗೆ ಈಗ ಬರುತ್ತಿರುವ ಮಳೆಯ ಪ್ರಮಾಣದ ನೀರು ಸಾಕು. ಹೆಚ್ಚಿನ ಪ್ರಮಾಣದ ನೀರೇನೂ ಬೇಕಾಗುವುದಿಲ್ಲ. ಆದರೆ ಆ ನೀರಿನ ಬಳಕೆ ಹೇಗೆಂಬುದು ನಮಗೆ ತಿಳಿದಿಲ್ಲ. ನೀರನ್ನು ಮಿತವಾಗಿ ಬಳಸುವುದು ಹೇಗೆ ಎಂಬ ಪರಿಜ್ಞಾನವು ನಮ್ಮಲ್ಲಿಲ್ಲ. ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಮುಕ್ತ ಅಂದರೆ, ನೈಸರ್ಗಿಕ, ಸಾವಯವ ಕೃಷಿಯ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಇದರಿಂದಾಗಿ ಸೂಕ್ಷ್ಮ ಜೀವಿಗಳು ಮರು ಹುಟ್ಟು ಪಡೆಯಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಕಾಡು ಬೆಳೆಸುವ ಮನೋಭಾವ ಹೆಚ್ಚಾಗಬೇಕು.

        ಕಾಡು ಎಂದರೆ ದೊಡ್ಡ ದೊಡ್ಡ ಗಿಡಗಳನ್ನೇ ಬೆಳೆಸಬೇಕೆಂದಿಲ್ಲ. ನಾವು ವಾಸ ಮಾಡುವ ಮನೆಯ ಸುತ್ತಲೂ ಸಣ್ಣ ಸಸಿಗಳನ್ನು ನೆಟ್ಟರೆ ಸಾಕು. ಅದು ಯಾವುದೇ ರೂಪದಲ್ಲಿರಲಿ. ನಮ್ಮ ಮನೆಯ ಬಳಿ ಸಣ್ಣ ಸಸಿಗಳು ಇದ್ದರೆ ಅದರಿಂದ ಬಹಳ ಅನುಕೂಲ ಎಂಬುದು ಇತ್ತೀಚೆಗಷ್ಟೇ ಅರಿವಾಗುತ್ತಿದೆ. ಮನೆಯಲ್ಲಿ ವೇಸ್ಟ್ ಮಾಡಬಹುದಾದ ನೀರನ್ನು ಪಾಟ್‍ಗಳಿಗೆ ಹಾಕಬಹುದು. ಇದರಿಂದ ಎರಡು ರೀತಿಯ ಅನುಕೂಲಗಳಿವೆ. ನೀರನ್ನು ವೇಸ್ಟ್ ಮಾಡದಂತೆ ನೋಡಿಕೊಳ್ಳುವುದರ ಜೊತೆಗೆ ಸಸ್ಯಗಳನ್ನು ಸಹ ಬೆಳೆಯಬಹುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap