ನವದೆಹಲಿ:
ವಿವಾದದ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿರುವ ದೆಹಲಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಎಬಿವಿಪಿ ಹಾಗೂ ಎಸ್ಎಫ್ಐ , ಡಿಎಸ್ಎಫ್ , ಎಐಎಸ್ಎ ವಿದ್ಯಾರ್ಥಿ ಸಂಘಟನೆಗಳ ನಡುವೆ ವಾಗ್ವಾದ ನಡೆದು ಉದ್ವಿಗ್ನತೆ ಉಂಟಾಗಿ ಮಾರಾಮಾರಿ ನಡೆದಿದೆ.
ದಸರಾ ಹಿನ್ನಲೆ ಜೆಎನ್‌ಯು ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಈ ಘಟನೆ ನಡೆದಿದ್ದು, ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ನಡೆಸಿದ ಈ ಸಂಭ್ರಮಾಚರಣೆ ವಿವಾದ ಕಿಡಿ ಹತ್ತಿಸಿದೆ. ರಾವಣ ಪ್ರತಿಕೃತಿ ಜೊತೆ ಅಫ್ಜಲ್ ಗುರು, ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ಇತರ ಪೋಟೋಗಳು ಉಳ್ಳ ಆಕೃತಿಯನ್ನು ದಹನ ಮಾಡಿದ್ದು, ಈ ಘರ್ಷಣೆಗೆ ಕಾರಣವಾಗಿದೆ.
ಬಾರಕ್ ಹಾಸ್ಟೆಲ್ ಆವರಣದಲ್ಲಿ ಎಬಿವಿಪಿ ವಿದ್ಯಾರ್ಥಿಗಳು ದಸರಾ ಹಬ್ಬವನ್ನು ಆಚರಿಸಿ, ಸಂಪ್ರದಾಯದಂತೆ ರಾವಣ ಪ್ರತಿಕೃತಿ ದಹನ ಮಾಡಿದ್ದಾರೆ. ಆದರೆ ದಹನ ಮಾಡುವಾಗ, ರಾವಣನ ಹತ್ತು ತಲೆಗಳಲ್ಲಿ ಟುಕ್ಡೆ ಟುಕ್ಡೆ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ವಿವಾದಾತ್ಮಕ ವ್ಯಕ್ತಿಗಳ ಫೋಟೋಗಳನ್ನು ಸೇರಿಸಿ ದಹನ ಮಾಡಲಾಗಿದೆ. ಇದರಲ್ಲಿ ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು, ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಚಾರು ಮಜುಮ್ದಾರ್, ಕಾನು ಸನ್ಯಾಲ್ ಮತ್ತಿತರರ ಚಿತ್ರಗಳು ಸೇರಿದ್ದವು. ಇದರಿಂದ ಇತರೆ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಅದರ ಪರಿಣಾಮವಾಗಿ, ದುರ್ಗಾ ವಿಸರ್ಜನೆ ಮೆರವಣಿಗೆಯ ವೇಳೆ ಭಾರೀ ಉದ್ವಿಗ್ನತೆ ಉಂಟಾಗಿ, ಎರಡು ಗುಂಪುಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಘರ್ಷಣೆಯಾದ ಹಿನ್ನಲೆ ಹಲವರು ಗಾಯಗೊಂಡಿದ್ದು, ಘಟನೆಯ ಬಳಿಕ ವಿಶ್ವವಿದ್ಯಾಲಯ ಆವರಣದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ.
ಎಬಿವಿಪಿ ತನ್ನ ಪ್ರಕಟಣೆಯಲ್ಲಿ, “ವಿಜಯದಶಮಿ ದಿನ ದುಷ್ಟ ಶಕ್ತಿಗಳ ನಿರ್ನಾಮದ ಸಂಕೇತವಾಗಿ ರಾವಣನೊಂದಿಗೆ ನಕ್ಸಲಿಸಂ, ಮಾವೋವಾದಿ ಹಿಂಸಾಚಾರ ಮತ್ತು ಭಾರತ ವಿರೋಧಿ ಚಿಂತನೆಗಳನ್ನೂ ದಹನ ಮಾಡಿದ್ದೇವೆ. ಇದು ದೇಶವನ್ನು ಬಲಪಡಿಸುವ ಸಂಕಲ್ಪದ ಸಂಕೇತ” ಎಂದು ಹೇಳಿದೆ. ಆದರೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಇದನ್ನು ಪ್ರಚೋದನಾತ್ಮಕ ಕೃತ್ಯವೆಂದು ಖಂಡಿಸುತ್ತಿವೆ.








