ವಾಷಿಂಗ್ಟನ್:
ಅಮೆರಿಕದ ಶಸ್ತ್ರಾಸ್ತ್ರಗಳನ್ನು ರಷ್ಯಾದ ಭೌಗೋಳಿಕ ಪ್ರದೇಶವನ್ನು ಗುರಿಯಾಗಿಸಿ ಬಳಸುವುದಕ್ಕೆ ಸಂಬಂಧಿಸಿದಂತೆ ಉಕ್ರೇನ್‌ನ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್ ಆದೇಶ ಹೊರಡಿಸಿದ್ದಾರೆ. ಮೂಲಗಳ ಪ್ರಕಾರ, ಬೈಡೆನ್ ಸರ್ಕಾರ ಉಕ್ರೇನ್ ಮೇಲಿನ ಶಸ್ತ್ರಾಸ್ತ್ರ ನಿರ್ಬಂಧವನ್ನು ತೆರವುಗೊಳಿಸಿದೆ. ಆಮೂಲಕ ಸದ್ಯ ಶಾಂತವಾಗಿರುವ ರಷ್ಯಾ-ಉಕ್ರೇನ್ ಯುದ್ಧ ಮತ್ತೆ ಉಲ್ಬಣಗೊಳ್ಳುವ ಭೀತಿ ಎದುರಾಗಿದೆ.
ಇನ್ನು ಬೈಡೆನ್ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಮುಂಬರುವ ದಿನಗಳಲ್ಲಿ ಉಕ್ರೇನ್ ತನ್ನ ಮೊದಲ ದೀರ್ಘ-ಶ್ರೇಣಿಯ ದಾಳಿಯನ್ನು ನಡೆಸಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಶ್ವೇತಭವನ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜ.20ಕ್ಕೆ ಅಧಿಕಾರ ಸ್ವೀಕರಿಸುತ್ತಿದ್ದು, ಇದಕ್ಕೆ ಎರಡು ತಿಂಗಳು ಮುನ್ನವೇ ಬೈಡೆನ್ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ. ಅದೂ ಅಲ್ಲದೇ ಕೆಲವಿ ದಿನಗಳ ಹಿಂದೆಯಷ್ಟೇ ಶಸ್ತ್ರಾಸ್ತ್ರ ನಿರ್ಬಂಧ ತೆರವುಗೊಳಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕಕ್ಕೆ ಮನವಿ ಮಾಡಿದ್ದರು.