ಗಂಡಿಗೆ ಅವಕಾಶವಿದೆ, ಹೆಣ್ಣಿಗೆ ಅವಕಾಶವಿದೆ, ನಮಗ್ಯಾಕಿಲ್ಲ? – ಮಂಜಮ್ಮಜೋಗತಿ ಪ್ರಶ್ನೆ

ತುಮಕೂರು :

      ಈ ಸಮಾಜದಲ್ಲಿ ಬದುಕಲು ಗಂಡಿಗೆ ಅವಕಾಶವಿದೆ, ಹೆಣ್ಣಿಗೆ ಅವಕಾಶವಿದೆ. ನಮಗ್ಯಾಕಿಲ್ಲ. ಸಮಾಜ, ಕುಟುಂಬದವರು ನಮ್ಮನ್ನು ನಾವಿರುವಂತೆಯೇ ಒಪ್ಪಿಕೊಳ್ಳಬೇಕು.., ಇದು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗುವ ಮೂಲಕ ತೃತೀಯಲಿಂಗಿ ಸಮುದಾಯದ ಕೀರ್ತಿ ಬೆಳಗಿರುವ ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರ ನೇರ ಆಗ್ರಹ.

      ಪ್ರಜಾಪ್ರಗತಿ-ಪ್ರಗತಿ ವಾಹಿನಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿದ ಅವರು ಯಾರು ಹುಟ್ಟುತ್ತಲೇ ಜೋಗತಿ, ಜೋಗಪ್ಪ, ಮಂಗಳಮುಖಿಯಾಗಿರಬೇಕೆಂದು ಜನ್ಮ ತಾಳಿರುವುದಿಲ್ಲ. ಶರೀರ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನುಸಾರ ಅವರು ಹೆಣ್ಣಾಗಿ, ಗಂಡಾಗಿ ಬದಲಾಗುತ್ತಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಮನೆಯಿಂದ ಆಚೆಗೆ ನೂಕಿ ಸಮಾಜದ ಅವಕೃಪೆ, ನಿಂದನೆಗೆ ಗುರಿಯಾಗಿಸುವುದಕ್ಕಿಂತ, ಮನೆಯವರು, ಸಮಾಜದವರು ಅವಿರದ್ದಂತೆಯೇ ಸ್ವೀಕರಿಸಿದರೆ ತೃತೀಯ ಲಿಂಗಿಗಳು ಬದುಕು ಕಟ್ಟಿಕೊಳ್ಳಬಹುದಾಗಿದೆ. ಕಳ್ಳರು, ಕೊಲೆಗಡುಕರನ್ನೆಲ್ಲ ತಮ್ಮ ಮಕ್ಕಳೆಂದು ಒಪ್ಪುವ ಸಮಾಜ ನಮ್ಮನ್ನೇಕೆ ಮನೆಯ ಸದಸ್ಯರೆಂದು ಉಳಿಸಿಕೊಳ್ಳಬಾರದು. ನಮಗೂ ಬದುಕಲು ಸಂವಿಧಾನಬದ್ದವಾದ ಹಕ್ಕಿದೆ. ನಮ್ಮಲ್ಲಿ ಇತರರಿಗಿಂತಲೂ ಹೆಚ್ಚು ಪ್ರೀತಿ ತೋರುವ ಮನಸ್ಸು, ಮಾನವೀಯತೆ, ಅಚ್ಚುಕಟ್ಟುತನವಿದೆ ಎಂದು ಹೇಳಿದರು.

      ವಿದ್ಯಾಭ್ಯಾಸ ಕಲ್ಪಿಸಿ:

       ಉದ್ಯೋಗಕ್ಕಿಂತ ಮೊದಲು ತೃತೀಯ ಲಿಂಗಿಗಳ ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಡಬೇಕು ಎಂದು ಅಭಿಪ್ರಾಯಪಟ್ಟ ಅವರು ನಮ್ಮವರಿಗೆ ವಿದ್ಯಾಭ್ಯಾಸ, ಅವಕಾಶಗಳನ್ನು ನೀಡಿದರೆ ಅವರು ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡುಗುವುದು ತಪ್ಪುತ್ತದೆ. ತೃತೀಯ ಲಿಂಗಿಗಳಲ್ಲಿ ಹಲವು ಮಂದಿ ಕಲೆಯಲ್ಲಿ ಪರಿಣಿತರಿದ್ದಾರೆ. ಜನಪದ ಅಕಾಡೆಮಿಯಿಂದ ಆಸಕ್ತ ತಂಡಗಳಿಗೆ ತರಬೇತಿ ಶಿಬಿರವನ್ನು ಏರ್ಪಾಟು ಮಾಡುತ್ತಿದ್ದೇವೆ. ಸ್ವಾವಲಂಬಿ, ಸಮಾಜದಲ್ಲಿ ಇತರರೊಂದಿಗೆ ಸಮಾನವಾಗಿ ಬಾಳುವ ಅವಕಾಶವೊಂದೇ ಸಮುದಾಯದವರು ಸರಕಾರ, ಸಮಾಜದ ಮುಂದೆ ಇಡುವ ಪ್ರಧಾನ ಬೇಡಿಕೆ ಎಂದರು.

ಸರಕಾರಿ ದಾಖಲೆಗಳಲ್ಲಿ ಸೇರ್ಪಡೆ ಸಮಸ್ಯೆ :

      ಭಾವನೆಗಳನುಸಾರ ಹೆಣ್ಣು, ಗಂಡಿನ ಬಟ್ಟೆ ಧರಿಸಿ ರೂಪಾಂತರವಾಗುವ ತೃತೀಯ ಲಿಂಗಿಗಳು ಆಧಾರ್, ಚುನಾವಣಾ ಗುರುತಿನ ಪತ್ರ ಮತ್ತಿತರ ಸರಕಾರಿ ದಾಖಲೆಗಳಲ್ಲಿ ವರ್ಷಗಳೇ ಉರುಳಿದರೂ ಅವರ ಹಿಂದಿನ ಹೆಸರೇ ಉಳಿದಿರುತ್ತದೆ. ಕೋರ್ಟ್ ಮೂಲಕ ಅಧಿಕೃತ ಪ್ರಮಾಣ ಪತ್ರ ಪಡೆದವರಿಗೆ ಮಾತ್ರ ತೃತೀಯಲಿಂಗಿಗಳ ಕಲಂನಲ್ಲಿ ಸೇರಿಸಲಾಗುತ್ತದೆ. ಆದರೆ ಈ ಪ್ರಮಾಣ ಪತ್ರ ಪಡೆಯಲು ಅನೇಕ ತೊಂದರೆಗಳಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಜೋಗತಿ, ಜೋಗಪ್ಪ, ಜೋಗಮ್ಮರೆಂದು ತೃತೀಯ ಲಿಂಗಿಗಳೆಂದು ಕರೆಯಲ್ಪಡುತ್ತಾರೆ.

      ಹಿರಿಯ ಜೋಗತಿಯರಿಂದ ಉಡದಾರ ಹರಿಸಿಕೊಂಡು, ಮುತ್ತುಕಟ್ಟಿಸಿಕೊಂಡವರು ಜೋಗತಿಯರಾಗಿದ್ದು, ದೇವರ ಕೊಡ ಹೊತ್ತು ಕುಣಿಯುವ ಚೌಡಿಕೆ ಮನೆತನದವರು ಜೋಗಪ್ಪರಾಗುತ್ತಾರೆ. ಮಹಿಳೆಯರು ದೇವರ ಕೊಡಹೊತ್ತು ಚೌಡಿಕೆ ಹಿಡಿದರೆ ಜೋಗಮ್ಮರೆನ್ನಲಾಗುತ್ತದೆ.ಆದರೆ ಇವರಲ್ಲಿ ಬಹುತೇಕರು ಲಿಂಗಪರಿವರ್ತಿತರಾಗಿರುವುದಿಲ್ಲ. ಜೋಗತಿ ಸಂಪ್ರದಾಯದಲ್ಲಿ ಒಂದು ಅಂಗ ಊನ ಮಾಡಿಕೊಂಡರೂ ಅವರನ್ನು ಹಿಂದೆ ಹತ್ತಿರಕ್ಕೆ ಸಮುದಾಯದವರೇ ಬಿಟ್ಟುಕೊಳ್ಳುತ್ತಿರಲಿಲ್ಲ. ಹೀಗಾಗಿ ತೃತೀಯ ಲಿಂಗಿಗಳೆಂದು ಕರೆಯಲು ಲಿಂಗಪರಿವರ್ತನೆ ಕಡ್ಡಾಯ ಮಾಡಿರುವುದು ಸರಕಾರಿ ದಾಖಲೆಗಳಲ್ಲಿ ಸೇರ್ಪಡೆಯ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದರು.

 ಅಂತ್ಯಕ್ರಿಯೆಗೂ ಸಂಕಷ್ಟ ;

      ಜರ್ಮನಿಯಲ್ಲಿ ಹೆಣ್ಣಾಗಿ ಬದಲಾದರೆ ಹೆಣ್ಣು, ಗಂಡಾಗಿ ಬದಲಾದರೆ ಗಂಡು ಎಂದೇ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಅಂತಹ ವ್ಯವಸ್ಥೆ ಜಾರಿಯಾದರೆ ತೃತೀಯಲಿಂಗೇ ಎನ್ನುವ ಸಮಸ್ಯೆಯೇ ಇರುವುದಿಲ್ಲ ಎಂದು ಜರ್ಮನಿಯ ಸಂಶೋಧಾನರ್ಥಿ ಸಾರಾ ಮೈಕಲ್ ಮಾತನ್ನು ಉಲ್ಲೇಖಿಸಿ ಒತ್ತಾಯಿಸಿದ ಮಂಜಮ್ಮ ಜೋಗತಿ ಅವರು ಜೋಗಪ್ಪರಾಗಿದ್ದ ಹುಸೇನ್‍ಸಾಬ್ ದೇವಿ ದೇವಾಲಯವನ್ನು ಕಟ್ಟಿ ಕೋಮು ಸಾಮರಸ್ಯ ಬೆಸೆದಿದ್ದರು.ಆದರೆ ಅವರು ಸತ್ತಾಗ ಅವರ ಅಂತ್ಯಕ್ರಿಯೆ ಮಾಡಲು ಎರಡು ಧರ್ಮೀಯರು ಸ್ಥಳವಕಾಶಕ್ಕೆ ತಕರಾರು ತೆಗೆದು ಕಡೆಗೆ ಹೋರಾಟ ಮಾಡಿದ ಮೇಲೆ ನೀಡಿದರು. ಮತ್ತೊಂದು ಇಂತಹುದೇ ವಿವಾದ ಉಂಟಾದ ಪ್ರಕರಣದಲ್ಲಿ ದಲಿತ ಮಹಿಳೆಯೊಬ್ಬಳು ನಮ್ಮ ಜಮೀನಿನಲ್ಲಿ ಜಾಗ ಕೊಡುತ್ತೇನೆ ಬನ್ನಿ ಅಂತ್ಯಕ್ರಿಯೆ ಮಾಡಿ ಎಂದು ಆಹ್ವಾನಿಸಿದರು. ಇಂತಹವರ ಸಂಖ್ಯೆ ಸಮುದಾಯದಲ್ಲಿ ಹೆಚ್ಚಬೇಕಿದೆ. ಸರಕಾರ ಮಾಸಾಶನ, ಸೌಲಭ್ಯಗಳು ಸ್ವಾವಲಂಬನೆ ಬದುಕಿಗೆ ಸಾಲದಾಗಿದೆ ಎಂದು ಹೇಳಿದರು.

ಅಭದ್ರತೆ, ಸಾಮಾಜಿಕ ಅವಮಾನದ ಬದುಕು : 

      ರಾಷ್ಟ್ರಪ್ರಶಸ್ತಿ ಪುರಸ್ಕøತ ನಾನು ಅವನಲ್ಲ ಅವಳು ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಮಾತನಾಡಿ 2009ರಲ್ಲಿ ನಮ್ಮ ಮನೆಯ ಸಮೀಪ ಬಾಲಕನೊಬ್ಬನನ್ನು ಬಲವಂತವಾಗಿ ಮಂಗಳಮುಖಿ ಮಾಡಲಾಯಿತು ಎಂದು ವೈರಲ್ ಆದ ಸುದ್ದಿ ನಾನು ಅವನ್ನಲ್ಲ ಅವಳು ಚಿತ್ರ ನಿರ್ದೇಶನಕ್ಕೆ ಪ್ರೇರಣೆಯಾಯಿತು. ಲೇಖಕಿ ವಿದ್ಯಾ ಅವರ ಲೀವಿಂಗ್‍ಸ್ಮೈಲಿ ಕೃತಿ ಆಧಾರಿತವಾಗಿ ಚಿತ್ರಕಥೆ ರೂಪಿತವಾಯಿತು. ಸ್ಯಾಂಡಲ್‍ವುಡ್‍ನ ಈ ಸಿನಿಮಾ ಏನೇ ಪ್ರಶಸ್ತಿಗಳನ್ನು ಗಳಿಸಿದ್ದರೂ ನಿರ್ಲಕ್ಷ್ಯಕ್ಕೊಳಗಾಗಿದ್ದ ಸಮುದಾಯದತ್ತ ಸಮಾಜದ ಲಕ್ಷ್ಯ ಹರಿಸುವಂತೆ ಮಾಡಿದ್ದೇ ಪ್ರಮುಖ ಸಾಧನೆ ಎಂದು ಭಾವಿಸುತ್ತೇನೆ. ಜೋಗತಿ ಪರಂಪರೆ ಶ್ರೀಮಂತ ಸಂಸ್ಕತಿಯನ್ನೊಳಗೊಂಡಿದೆ. ಅಂತೆಯೇ ಮಂಗಳಮುಖಿಯರು ತಮ್ಮದೇ ಚೌಕಟ್ಟು, ರೀತಿ ರಿವಾಜುಗಳನ್ನು ಹಾಕಿಕೊಂಡು ಭಿಕ್ಷಾಟನೆಯ ಬದುಕು ಸಾಗಿಸುತ್ತಿದ್ದು, ಭಾರತೀಯ ಸಮಾಜದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಸಹ ತೃತೀಯ ಲಿಂಗಿಗಳು ಅಭದ್ರತೆ ಸಾಮಾಜಿಕ ಅವಮಾನದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಂಜಮ್ಮ ಜೋಗತಿ, ದೀಪಿಕಾ ರಂತಹ ಈ ಸಮುದಾಯದ ಅನೇಕರು ಸಮಾಜಮುಖಿಯಾಗಿ ಮುಂದೆ ಬಂದು ಸಾಧನೆ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.

      ಸಹಬಾಳ್ವೆ ಸಂಸ್ಥೆ ಮುಖ್ಯಸ್ಥೆ ದೀಪಿಕಾ ಅವರು ಮಾತನಾಡಿ 2007ರಲ್ಲಿ ನಮ್ಮ ಸಮುದಾಯದ ಸಂಘಟನೆಯನ್ನು ಜಿಲ್ಲೆಯಲ್ಲಿ ಅಸ್ಥಿತ್ವಕ್ಕೆ ತರಲಾಗಿದ್ದು, ಮುಂಗಳಮುಖಿಯರ ಹಿತಾಸಕ್ತಿ ಕಾಪಾಡಿಕೊಂಡು ಬರುತ್ತಿರುವುದಲ್ಲದೇ ಅವರಿಂದ ಸಮಾಜದಲ್ಲಿ ಏನಾದರೂ ತಪ್ಪುಗಳು ಸಂಭವಿಸಿದರೆ ಅವರ ವಿರುದ್ಧವೂ ಧ್ವನಿ ಎತ್ತಿ ಕಾನೂನು ಕ್ರಮಕ್ಕೂ ಒತ್ತಾಯಿಸಿದ್ದೇವೆ. ಕುಟುಂಬದಿಂದ ದೂರ ತಳ್ಳಲ್ಪಟ್ಟ ನಮ್ಮನ್ನು ಗೌರವದಿಂದ ಕಂಡರೆ ಸಮಾಜದ ಇತರರಿಗೆ ನಾವು ಅಷ್ಟೇ ಗೌರವ ಕೊಡುತ್ತೇವೆ. ಆದರೆ ಕೆಲವರು ದೌರ್ಜನ್ಯಕ್ಕೆ ಮುಂದಾದಾಗ ಮಂಗಳಮುಖಿಯರು ತಿರುಗಿ ಬೀಳುತ್ತಾರೆ. ನಾವು ಮನುಷ್ಯರೇ.ಇತರರಂತೆ ಆಹಾರ, ಉಡುಗೆ-ತೊಡುಗೆ, ಆಚಾರ ವಿಚಾರ, ಪೂಜೆ, ಪುನಸ್ಕಾರಗಳನ್ನು ಮಾಡುತ್ತಾ ಬಂದಿರುವವರಾಗಿದ್ದು, ವಸತಿ, ಆರೋಗ್ಯ, ಆರ್ಥಿಕ ಸಮಸ್ಯೆ ಇದೇ ಮೊದಲಾದ ಸಮಸ್ಯೆಗಳು ಸಮುದಾಯದವರನ್ನು ಕಾಡುತ್ತಿವೆ. ಇದಕ್ಕೆ ಪರಿಹಾರ ದೊರಕುವ ಕಾರ್ಯ ಆಗಬೇಕು ಎಂದರು.

ಮಂಜುನಾಥ ಶೆಟ್ಟಿಯಿಂದ-ಮಂಜಮ್ಮ ಜೋಗತಿಯಾಗಿ ಪದ್ಮಶ್ರೀವರೆಗೆ…

      ಸಾಧನೆಯ ಛಲ, ಹಂಬಲವಿದ್ದರೆ ನಾವು ಏನೇ ಆಗಿದ್ದರೂ ಸಾಧನೆ ಸಾಧ್ಯ. ಆರ್ಯ ವೈಶ್ಯ ಜನಾಂಗದಲ್ಲಿ ಹುಟ್ಟಿ ಮಂಜುನಾಥಶೆಟ್ಟಿಯಿಂದ ಮಂಜಮ್ಮ ಜೋಗತಿಯಾದ ನಾನು ತಂದೆಯವರ ಅಣತಿಯಂತೆ ಕುಲಕ್ಕೆ ಕೀರ್ತಿ ತರುವ ಕಾರ್ಯ ಮಾಡಿರುವೆ. ಜನಪದ ಕಲೆ ನನ್ನನ್ನು ಪದ್ಮಶ್ರೀಯ ಎತ್ತರಕ್ಕೆ ಕೊಂಡೊಯ್ದಿದೆ. ಈ ಪುರಸ್ಕಾರವನ್ನು ನನ್ನ ಸಮುದಾಯದವರು, ನನ್ನಗುರುಗಳು, ಪೋಷಕರು, ಬಂಧು-ಬಾಂಧವರು, ನನ್ನನ್ನು ಬೆಳೆಸಿದ ಮಾಧ್ಯಮದವರಿಗೆ ಅರ್ಪಿಸುತ್ತೇನೆ. ಇದೇ ಮೊದಲ ಬಾರಿಗೆ ತುಮಕೂರಿನ ಪ್ರಜಾಪ್ರಗತಿ-ಪ್ರಗತಿ ವಾಹಿನಿ ವೇದಿಕೆಯಲ್ಲಿ ಒಟ್ಟಾಗಿ ಕುಳಿತು ಸಂವಾದಿಸಿದ್ದು ಖುಷಿ ತರಿಸಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಕಾನೂನಿನ ಮಿತಿಯಲ್ಲೇ ಮುಖ್ಯವಾಹಿನಿಗೆ ತರುವ ಕಾರ್ಯವಾಗಲಿ

      ತೃತೀಯ ಲಿಂಗಿಗಳೆಂದು ಕಾನೂನಿನ ಚೌಕಟ್ಟಿನಲ್ಲೇ ಅಗತ್ಯ ದಾಖಲೆ, ಲಿಂಗಪರಿವರ್ತನೆ ಮೂಲಕ ಗುರುತಿಸಬೇಕೇ ಹೊರತು ಭಾವನಾತ್ಮಕ ದೃಷ್ಟಿಯಲ್ಲಿ ಯಾರನ್ನೂ ಆ ಸಮುದಾಯಕ್ಕೆ ಸೇರಿದವರೆಂದು ಗುರುತಿಸಲು ಸಾಧ್ಯವಿಲ್ಲ. ಮಿತಿ ಇರದಿದ್ದರೆ ನಾನಾ ಸಮಸ್ಯೆಗಳು ಎದುರಾಗುತ್ತವೆ. ಕೌಟಂಬಿಕ ಸಂಬಂಧದಿಂದ ದೂರವಾಗುವ ಮಂಗಳಮುಖಿಯರಿಗೆ ಗುರು-ಚೇಲಾ, ನಾನಾ-ನಾನಿ ಹೀಗೆ ಅವರದ್ದೇ ಹೊಸ ಸಂಬಂಧಗಳು ಸೃಷ್ಟಿಯಾಗುತ್ತವೆ. ಏಕಾಏಕಿ ಅವರು ಭಿಕ್ಷಾಟನೆಗೆ ಇಳಿಯಲು ಸಾಧ್ಯವಿಲ್ಲ. ಅವರ ಜಗತ್ತು, ಆಚರಣೆಗಳು ವಿಭಿನ್ನವಾಗಿವೆ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಕಾರ್ಯ ಆಗಬೇಕಿದೆ ಎಂದು ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಹೇಳಿದರು.

ಇಂತಿಷ್ಟೇ ದುಡ್ಡು ಕೊಡಬೇಕೆಂದು ಒತ್ತಾಯಿಸುವಂತಿಲ್ಲ :

      ಮದುವೆ, ಗೃಹಪ್ರವೇಶ ಶುಭ ಸಮಾರಂಭಗಳಲ್ಲಿ ಮಂಗಳಮುಖಿಯರು ಸಂಪ್ರದಾಯದಂತೆ ತೆರಳಿ ಅವರು ಪ್ರೀತಿಯಿಂದ ನೀಡಿದಷ್ಟು ಕಾಣಿಕೆ ಪಡೆದು ಆಶೀರ್ವಾದ ಮಾಡಿ ಬರುವುದು ವಾಡಿಕೆ. ಆದರೆ ಕೆಲವರು ವಧು-ವರರ ಕೊಠಡಿಗೆ ನುಗ್ಗಿ ಇಂತಿಷ್ಟು ಹಣ ಕೊಡಲೆಬೇಕೆಂದು ಬಲವಂತ ಮಾಡುತ್ತಾರೆಂಬ ದೂರುಗಳ ಸಂಬಂಧ ನಮ್ಮ ಸಂಘಟನೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅಂತಹ ಘಟನೆಗಳು ಈಗ ತಗ್ಗಿವೆ. ಭಿಕ್ಷಾಟನೆಯಲ್ಲಾಗಲೀ, ಶುಭ ಸಮಾರಂಭಗಳಲ್ಲಿ ಇಂತಿಷ್ಟು ದುಡ್ಡು ಕೊಡಬೇಕೆಂದು ಒತ್ತಾಯಿಸುವಂತಿಲ್ಲ ಎಂದು ಸಹಬಾಳ್ವೆ ಸಂಸ್ಥೆ ಮುಖ್ಯಸ್ಥೆ ದೀಪಿಕಾ ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap