ಬೆಂಗಳೂರು:
ಭಾರತ ತಂಡದ ಮಾಜಿ ಸ್ಪಿನ್ನರ್, ಕನ್ನಡಿಗ ಸುನಿಲ್ ಜೋಶಿ ಅವರು ನವೆಂಬರ್ 14 ರಿಂದ ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ನಲ್ಲಿ ಭಾರತ ಎ ತಂಡಕ್ಕೆ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಅವರು ಸೆಂಟರ್ ಆಫ್ ಎಕ್ಸಲೆನ್ಸ್ ನ ಸ್ಪಿನ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇತ್ತೀಚೆಗೆ ಬಿಸಿಸಿಐ ಸಿಒಇ ಸೇರಿರುವ ಜೋಶಿ, ಆಸ್ಟ್ರೇಲಿಯಾ ಎ ವಿರುದ್ಧದ ಟೂರ್ನಿಯಲ್ಲೂ ಭಾರತ ಎ ತಂಡಕ್ಕೆ ಕೋಚ್ ಜವಾಬ್ದಾರಿ ನಿಭಾಯಿಸಿದ್ದರು.
ಸುನಿಲ್ ಜೋಶಿ ಜೊತೆಗೆ ಬ್ಯಾಟಿಂಗ್ ಕೋಚ್ ಆಗಿ ಅಪೂರ್ವ ದೇಸಾಯಿ ಮತ್ತು ಪಲ್ಲವ್ ವೋಹ್ರಾ ಫೀಲ್ಡಿಂಗ್ ಕೋಚ್ ಇರಲಿದ್ದಾರೆ. ಸದ್ಯ, ಭಾರತ ಎ ತಂಡದ ತರಬೇತುದಾರರಾಗಿರುವ ಹೃಷಿಕೇಶ್ ಕಾನಿಟ್ಕರ್, ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ತಂಡದ ಪ್ರಥಮ ದರ್ಜೆ ಪಂದ್ಯಗಳಲ್ಲಿ ನಿರತರಾಗಿರುತ್ತಾರೆ.
ಜಿತೇಶ್ ಶರ್ಮ ನಾಯಕತ್ವದ ತಂಡದಲ್ಲಿ ಐಪಿಎಲ್‌ನಲ್ಲಿ ಮಿಂಚಿರುವ ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ನಮನ್ ಧೀರ್, ನೆಹಾಲ್ ವಧೇರಾ ಮತ್ತು ರಮಣದೀಪ್ ಸಿಂಗ್ ರಂತಹ ತಾರಾ ಆಟಗಾರರು ಕಾಣಿಸಿಕೊಂಡಿದ್ದಾರೆ.
8 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಬಿ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಎ ತಂಡಗಳ ಜತೆಗೆ ಯುಎಇ, ಓಮನ್ ತಂಡಗಳಿದ್ದರೆ, ಎ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಎ ತಂಡಗಳ ಜತೆಗೆ ಹಾಂಕಾಂಗ್ ತಂಡ ಸ್ಥಾನ ಪಡೆದಿದೆ. ಭಾರತ-ಪಾಕಿಸ್ತಾನ ಎ ತಂಡಗಳು ನವೆಂಬರ್ 16ಕ್ಕೆ ಮುಖಾಮುಖಿಯಾಗಲಿವೆ.
ಭಾರತ ತನ್ನ ಅಭಿಯಾನವನ್ನು ನ.14ಕ್ಕೆ ಯುಎಇ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ನ.18ರ ಕೊನೇ ಲೀಗ್ ಪಂದ್ಯದಲ್ಲಿ ಓಮನ್ ವಿರುದ್ಧ ಆಡಲಿದೆ. ಗುಂಪಿನ ಅಗ್ರ 2 ತಂಡಗಳು ನ.21ರಂದು ನಡೆಯಲಿರುವ ಸೆಮಿಫೈನಲ್ ಪ್ರವೇಶಿಸಲಿವೆ. ನ.23ರಂದು ಫೈನಲ್ ನಡೆಯಲಿದೆ.
ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್, ಸೂರ್ಯಾಂಶ್ ಶೆಡ್ಜ್, ಜಿತೇಶ್ ಶರ್ಮಾ (ನಾಯಕ), ರಮಣದೀಪ್ ಸಿಂಗ್, ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್ನೀತ್ ಸಿಂಗ್, ವಿಜಯ್ ಕುಮಾರ್ ವೈಶಕ್, ಯುದ್ವೀರ್ ಸಿಂಗ್ ಚರಕ್, ಅಭಿಷೇಕ್ ಪೊರೆಲ್, ಸುಯಾಶ್ ಶರ್ಮಾ.








