ಹುಬ್ಬಳ್ಳಿ:
ಇಲ್ಲಿರುವ ಮುಸ್ಲಿಂರೆಲ್ಲ ಹಿಂದುಗಳೇ ಆಗಿದ್ದವರು. ಆಮಿಷ, ಬೆದರಿಕೆಯೊಡ್ಡಿ ಅವರನ್ನು ಕನ್ವರ್ಟ್ ಮಾಡಿದ್ದರು. ಇಲ್ಲಿರುವ ಸಾಬರು ನಿಜವಾದ ಸಾಬರಲ್ಲ. ಬೆದರಿಕೆ, ಆಮಿಷಕ್ಕೆ ಬಲಿಯಾದವರು. ಹೀಗಿರುವಾಗ ವಕ್ಫ್‌ಗೆ ಹೇಗೆ ಲಕ್ಷಾಂತರ ಎಕರೆ ಭೂಮಿ ಬರುತ್ತದೆ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.
ವಕ್ಫ್ ಭೂ ಕಬಳಿಕೆ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಇದು ವಕ್ಫ್ ಭೂಮಿ ಎನ್ನುವುದೆಲ್ಲ ಸುಳ್ಳು. ಆದಿಲ್ ಶಾ ಬಂದಿದ್ದ, ಇನ್ನೊಬ್ಬ ಬಂದಿದ್ದ. ವಿಜಯಪುರದಲ್ಲಿ ಅವರು ಆಡಳಿತ ಮಾಡಿದ್ರು ಅಂತೆಲ್ಲಾ ಹೇಳ್ತಾರೆ. ಆದಿಲ್ ಶಾ ಏನು ಇಲ್ಲಿಯವನೇ? ಎಂದು ಪ್ರಶ್ನಿಸಿದ ಅವರು, ಇಲ್ಲಿರುವ ಸಾಬರು ನಿಜವಾದ ಸಾಬರಲ್ಲ. ಇಲ್ಲಿದ್ದವರೆಲ್ಲಾ ಹಿಂದುಗಳೇ ಆಗಿದ್ದವರು. ಬೆದರಿಕೆ, ಆಮಿಷಕ್ಕೆ ಬಲಿಯಾದವರು. ಹೀಗಿರುವಾಗ ವಕ್ಫ್‌ಗೆ ಹೇಗೆ ಲಕ್ಷಾಂತರ ಎಕರೆ ಭೂಮಿ ಬರುತ್ತದೆ? ಕಿಡಿಕಾರಿದ್ದಾರೆ.
ವಕ್ಫ್‌ಗೆ ಎಲ್ಲಿಂದ ಬರುತ್ತದೆ ಆಸ್ತಿ. ಸುಮ್ ಸುಮ್ನೆ ದಾನ ಕೊಟ್ಟಿದ್ದು ಎನ್ನುತ್ತಾರೆ. ದಾನ ಕೊಡುವವರು ಲಕ್ಷ ಎಕರೆಗಟ್ಟಲೆ ದಾನ ಕೊಡುತ್ತಾರೆಯೇ ಯಾರಾದರೂ? ಅದ್ಯಾರು ದಾನ ಕೊಟ್ಟರು? ಎಂದು ಜೋಶಿ ಕಿಡಿ ಕಾರಿದರು.ವಕ್ಫ್‌ಗೆ ಯಾರೂ ಲಕ್ಷಾಂತರ ಎಕರೆ ಭೂಮಿ ದಾನ ಕೊಡಲು ಸಾಧ್ಯವಿಲ್ಲ. ತಮ್ಮಲ್ಲಿ 1 ರೂಪಾಯಿ ಇದ್ರೆ 5 ಪೈಸೆ, 10 ಪೈಸೆ ಹೆಚ್ಚೆಂದರೆ 20 ಪೈಸೆಯಷ್ಟು ದಾನ ಮಾಡುವುದು ಸಹಜ. ಆದರೆ, ಅಷ್ಟನ್ನೂ ದಾನ ಬಂದಿದ್ದೆಂದು ಒಪ್ಪಲು ಸಾಧ್ಯವಿಲ್ಲ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.
ರೈತರಿಗೆ ವಕ್ಫ್ ನೋಟಿಸ್ ನೀಡುವುದರಲ್ಲಿ ಅನಧಿಕೃತ, ಅಧಿಕೃತ ಎನ್ನಲಾಗದು. ರೈತರ ಭೂಮಿ ಹೊಡೆಯಲು ಇವರ್ಯಾರು? ಎಂದು ವಕ್ಫ್ ಬೋರ್ಡ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.