ಗಂಗಾವತಿ:
ಮಕ್ಕಳಿಗೆ ಮೊಟ್ಟೆ ಕೊಟ್ಟು ವೀಡಿಯೋ ಮಾಡಿ ವಾಪಸ್ ಕಸಿದುಕೊಂಡು ರಾಜ್ಯಾದ್ಯಂತ ಸುದ್ದಿಯಾಗಿದ್ದ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ನ್ಯಾಯಾಧೀಶರುಗಳು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕೊಪ್ಪಳ ಜಿಲ್ಲಾ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್. ದರಗದ, ಗಂಗಾವತಿಯ ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ್ ಎಸ್. ಗಾಣಿಗೇರ ಅವರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಮೊಟ್ಟೆ ಪ್ರಕರಣ ಪೂರ್ಣ ಮಾಹಿತಿ ಪಡೆದುಕೊಂಡ ನ್ಯಾಯಾಧೀಶರು, ಕೇಂದ್ರದಲ್ಲಿ ಮಕ್ಕಳಿಗೆ ಇರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಶೌಚಾಲಯ, ಕುಡಿಯುವ ನೀರು, ದಾಸ್ತಾನು ಮಾಡಲಾಗಿರುವ ಆಹಾರ, ಮಕ್ಕಳಿಗೆ ನೀಡುವ ಔಷಧಿಗಳನ್ನು ಪರಿಶೀಲಿಸಿದರು.
ಅಂಗನವಾಡಿ ಕೇಂದ್ರದ ಸುತ್ತಲೂ ಇರುವ ಕಸಕಡ್ಡಿ, ತಿಪ್ಪೆಗುಂಡಿ ತೆರವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೇಂದ್ರದಲ್ಲಿ ನೀರಿನ ನಳ ಇಲ್ಲದಿರುವುದು, ಮಕ್ಕಳಿಗೆ ನಿತ್ಯ ನೀಡುವ ಆಹಾರದ ಮೆನು ಹಾಕದಿರುವುದು, ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲದಿರುವುದು, ಶೌಚಾಲಯದ ಕಟ್ಟಡ ಬಿರುಕು ಉಂಟಾಗಿರುವುದನ್ನು ನ್ಯಾಯಾಧೀಶರುಗಳು ಗಮನಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.