ಬಳ್ಳಾರಿ
ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಸಹಚಚರರನ್ನು ಬಂಧಿಸಲಾಗಿದೆ. ಈಗಾಗಲೇ ಅವರು ಜೈಲು ಸೇರಿ ಮೂರು ತಿಂಗಳು ಆಗಿದೆ. ಇಂದಿಗೆ (ಸೆಪ್ಟೆಂಬರ್ 17) ದರ್ಶನ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳುವುದರಲ್ಲಿ ಇತ್ತು. ಹೀಗಾಗಿ, ದರ್ಶನ್ ಹಾಗೂ ಗ್ಯಾಂಗ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಅವರ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಆಗಿದೆ.
ಕುರ್ಚಿ ಬಗ್ಗೆ ಮತ್ತೊಮ್ಮೆ ಜಡ್ಜ್ ಎದುರು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ‘ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡೋಕು ಜೈಲಾಧಿಕಾರಿಗಳು ಆಗಲ್ಲ ಎಂದು ಹೇಳುತ್ತಿದ್ದಾರೆ. ಬೇರೆ ಕೈದಿಗಳಿಗೆ ಆ ವ್ಯವಸ್ಥೆ ಇದೆ. ಆದರೆ, ದರ್ಶನ್ಗೆ ಚೇರ್ ವ್ಯವಸ್ಥೆ ಮಾಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದರು. ‘ಕೈದಿಗಳಿಗೆ ಏನು ವ್ಯವಸ್ಥೆ ನೀಡಬೇಕು ಎಂದು ಜೈಲಿನ ನಿಯಮ ಪಟ್ಟಿಯಲ್ಲಿ ಇದೆ. ಅದು ಕೊಡಬೇಕು ಎಂದು ಆದೇಶ ಮಾಡುತ್ತೇನೆ’ ಎಂದು ಜಡ್ಜ್ ಹೇಳಿದರು.
ಇಂದು ದರ್ಶನ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳುವುದರಲ್ಲಿ ಇತ್ತು. ಹೀಗಾಗಿ, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಎದುರು ಅವರನ್ನು ಹಾಜರುಪಡಿಸಲಾಯಿತು. ಬಳ್ಳಾರಿ ಸೆಂಟ್ರಲ್ ಜೈಲಿನಿಂದ ದರ್ಶನ್, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಪವಿತ್ರಾಗೌಡ ಹಾಜರಾಗಿದ್ದರು. ಉಳಿದಂತೆ ತುಮಕೂರು, ಮೈಸೂರು, ಧಾರವಾಡ, ಕಲಬುರಗಿ, ವಿಜಯಪುರ, ಹಿಂಡಲಗಾ ಜೈಲಿನಿಂದ ಆರೋಪಿಗಳು ಹಾಜರಾಗಿದ್ದರು. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಜಡ್ಜ್ ಆದೇಶ ಹೊರಡಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 3991 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಹೇಳಿಕೆ, ಸಾಕ್ಷಿಗಳ ಬಗ್ಗೆ ಉಲ್ಲೇಖ ಆಗಿದೆ. ವಿಚಾರಣೆ ವೇಳೆ ದರ್ಶನ್ ಅವರು ತಾವು ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಎಲ್ಲಿಯೂ ಕೊಲೆಯನ್ನು ಇವರೇ ಮಾಡಿದ್ದಾರೆ ಎಂಬ ವಿಚಾರ ಉಲ್ಲೇಖ ಆಗಿಲ್ಲ. ಶೀಘ್ರವೇ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡೋ ಸಾಧ್ಯತೆ ಇದೆ.