ನವದೆಹಲಿ:
ರದ್ದಾಗಿರುವ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು ಮಂಗಳವಾರ ದೆಹಲಿ ನ್ಯಾಯಾಲಯ ಮೇ 20ರವರೆಗೆ ವಿಸ್ತರಿಸಿದೆ.
ಈ ಹಿಂದೆ ಪ್ರಕರಣದಲ್ಲಿ ನೀಡಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ, ಇಡಿ ಇಂದು ಕವಿತಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು. ಆರೋಪಿಯ ವಿಚಾರಣೆ ನಡೆಸಿದ ಇಡಿ ಮತ್ತು ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಈ ಆದೇಶ ನೀಡಿದರು.
ಏತನ್ಮಧ್ಯೆ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿರುವ ಹೊಸ ಚಾರ್ಜ್ ಶೀಟ್ ಅನ್ನು ಪರಿಗಣಿಸಬೇಕೆ ಎಂಬ ಆದೇಶವನ್ನು ನ್ಯಾಯಾಧೀಶವರು, ಮೇ 20ಕ್ಕೆ ಕಾಯ್ದಿರಿಸಿದ್ದಾರೆ.
ಇಂದು ನಡೆದ ವಿಚಾರಣೆಯ ವೇಳೆ, ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಲು ಪ್ರಾಸಿಕ್ಯೂಷನ್ ದೂರಿನಲ್ಲಿ ಇಡಿ ಚಾರ್ಜ್ ಶೀಟ್‌ಗೆ ಸಮಾನವಾದ ಸಾಕಷ್ಟು ಪುರಾವೆಗಳಿವೆ ಎಂದು ಕೇಂದ್ರ ತನಿಖಾ ಸಂಸ್ಥೆ ನ್ಯಾಯಾಧೀಶರಿಗೆ ತಿಳಿಸಿದೆ.
ಸದ್ಯ ರದ್ದಾಗಿರುವ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 46 ವರ್ಷದ ಬಿಆರ್‌ಎಸ್ ನಾಯಕಿ ಕವಿತಾ ಅವರನ್ನು ಮಾರ್ಚ್ 15ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಲ್ಲಿ ಇಡಿ ಅಧಿಕಾರಿಗಳು ಬಂಧಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ