ನವದೆಹಲಿ:
ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಇಲ್ಲಿನ ನ್ಯಾಯಾಲಯವು ಜೂನ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನಿನ ಅವಧಿ ಮುಗಿದ ನಂತರ ಭಾನುವಾರ ತಿಹಾರ್ ಜೈಲಿನ ಅಧಿಕಾರಿಗಳ ಮುಂದೆ ಶರಣಾದ ಮುಖ್ಯಮಂತ್ರಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರಾದ ಸಂಜೀವ್ ಅಗರ್ವಾಲ್ ಅವರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಅರವಿಂದ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು 14 ದಿನಗಳ ಕಾಲ ವಿಸ್ತರಿಸುವಂತೆ ಕೋರಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ. ಕೇಜ್ರಿವಾಲ್ ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವಾಗ ಮೇ 20 ರಂದು ಇ.ಡಿ ಅರ್ಜಿಯನ್ನು ಸಲ್ಲಿಸಿತ್ತು.
ಅರವಿಂದ ಕೇಜ್ರಿವಾಲ್ ಅವರನ್ನು ಜೂನ್ 5 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಲಯ, ಆ ದಿನವೇ ಆರೋಗ್ಯದ ಆಧಾರದ ಮೇಲೆ ಅವರ ಮಧ್ಯಂತರ ಜಾಮೀನು ಅರ್ಜಿಯ ಕುರಿತಾದ ಆದೇಶವನ್ನು ಹೊರಡಿಸಲು ಸಂಬಂಧಿಸಿದ ನ್ಯಾಯಾಧೀಶರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಜೈಲಿಗೆ ಶರಣಾಗುವುದಕ್ಕೂ ಮುನ್ನ ಕೇಜ್ರಿವಾಲ್ ಅವರು ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕ ಮತ್ತು ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಮನೆಯಿಂದ ಹೊರಡುವ ವೇಳೆ ಕೇಜ್ರಿವಾಲ್ ತಮ್ಮ ಮಕ್ಕಳನ್ನು ತಬ್ಬಿಕೊಂಡರು ಮತ್ತು ತನ್ನ ಹೆತ್ತವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಕೇಜ್ರಿವಾಲ್ ಅವರ ಪತ್ನಿ ಸುನೀತಾ, ಪುತ್ರ ಪುಲ್ಕಿತ್ ಮತ್ತು ಪುತ್ರಿ ಹರ್ಷಿತಾ ಅವರು ಕೇಜ್ರಿವಾಲ್ ಅವರು ಜೈಲು ಅಧಿಕಾರಿಗಳ ಮುಂದೆ ಶರಣಾಗುವ ವೇಳೆ ಜೊತೆಗಿದ್ದರು.
ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಪ್ರಕರಣದಲ್ಲಿ ಮಧ್ಯಂತರ ಜಾಮೀನನ್ನು ಇನ್ನೂ ಏಳು ದಿನಗಳ ಕಾಲ ವಿಸ್ತರಿಸುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವೈದ್ಯಕೀಯ ಕಾರಣಕ್ಕೆ ಏಳು ದಿನಗಳವರೆಗೆ ಮಧ್ಯಂತರ ಜಾಮೀನಿನ ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ನಿಗದಿ ಮಾಡಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ನಿರಾಕರಿಸಿತ್ತು.