ನವದೆಹಲಿ:
ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ನೀಡಲು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಬುಧವಾರ ನಿರಾಕರಿಸಿದೆ.
ವೈದ್ಯಕೀಯ ಕಾರಣಗಳಿಗಾಗಿ 7 ದಿನಗಳ ಮಧ್ಯಂತರ ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ತಿರಸ್ಕರಿಸಿದ್ದು ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಜೂನ್ 19ರವರೆಗೆ ವಿಸ್ತರಿಸಲಾಗಿದೆ.
ಇನ್ನು ಸಾಮಾನ್ಯ ಜಾಮೀನು ಅರ್ಜಿಯು ಜೂನ್ 7ರಂದು ವಿಚಾರಣೆಗೆ ಬರಲಿದೆ. ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಇಡಿ ಬಂಧಿಸಿತ್ತು. ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಒಂದು ದಿನದ ನಂತರ ಕೇಜ್ರಿವಾಲ್ ಶರಣಾದರು.
ಕೇಜ್ರಿವಾಲ್ ಅವರ ಆರೋಗ್ಯ ಸಂಬಂಧಿತ ಪರೀಕ್ಷೆಗಳಿಗೆ ಕೆಲವು ಸೂಚನೆಗಳನ್ನು ರವಾನಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ವಿಸಿ ಮೂಲಕ ತಿಹಾರ್ ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಕೇಜ್ರಿವಾಲ್ ಅವರನ್ನು ಜೂನ್ 19ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಜೂನ್ 19ರಂದು ಮಧ್ಯಾಹ್ನ 2 ಗಂಟೆಗೆ ರಜಾಕಾಲದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು.
ಕೇಜ್ರಿವಾಲ್ ಅವರ ಪರವಾಗಿ ವಾದ ಮಂಡಿಸಿದ ವಕೀಲ ವಿವೇಕ್ ಜೈನ್, ಕೇಜ್ರಿವಾಲ್ ಅವರ ತೂಕದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆದರೆ, ಮುಖ್ಯಮಂತ್ರಿ ಪರವಾಗಿ ಸೂಕ್ತ ಅರ್ಜಿ ಸಲ್ಲಿಸಬೇಕು ಮತ್ತು ಅವರು ಯಾವ ಪರಿಹಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಜಾರಿ ನಿರ್ದೇಶನಾಲಯ (ಇಡಿ) ಪರವಾಗಿ ಹಾಜರಾದ ಎಸ್‌ಜಿಐ ತುಷಾರ್ ಮೆಹ್ತಾ ಅವರು ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಎತ್ತಿದ್ದರು.
ಇತ್ತೀಚೆಗಷ್ಟೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಕೇಜ್ರಿವಾಲ್ ಜೊತೆಗೆ ಆಮ್ ಆದ್ಮಿ ಪಕ್ಷವನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ತನಿಖಾ ಸಂಸ್ಥೆ ಸಲ್ಲಿಸಿರುವ ಏಳನೇ ಪೂರಕ ಆರೋಪಪಟ್ಟಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಸಿಸೋಡಿಯಾ ಇನ್ನೂ ಜೈಲಿನಲ್ಲಿರುವಾಗಲೇ, ಇಡಿ ನೀಡಿದ ರಿಯಾಯಿತಿಯ ಪ್ರಕಾರ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿತ್ತು.