ಜನಾರ್ದನರೆಡ್ಡಿ ಒಬ್ಬ ಜುಜುಬಿ ರಾಜಕಾರಣಿ : ಸಿದ್ದರಾಮಯ್ಯ

ಸಂಡೂರು: 

    ಜನಾರ್ದನರೆಡ್ಡಿ ಒಬ್ಬ ಜುಜುಬಿ ರಾಜಕಾರಣಿ. ಎಷ್ಟು ವರ್ಷ ಜೈಲಿಗೆ ಹೋಗಿ ಬಂದಿದ್ದೀರಿ? ನಿಮ್ಮ ಅಟ್ಟಹಾಸ ಮುರಿದದ್ದು, ಬಳ್ಳಾರಿ ಜಿಲ್ಲೆಯ ಮಹಾ ಜನತೆಯನ್ನು ಭಯಮುಕ್ತ ಗೊಳಿಸಿದ್ದು ಇದೇ ಸಿದ್ದರಾಮಯ್ಯ ಅನ್ನೋದನ್ನು ಮರೀಬೇಡಿ ಎಂದು ಸಿಎಂ ಸಿದ್ದರಾಮಯ್ಯ ಬಹಿರಂಗ ಎಚ್ಚರಿಕೆ ನೀಡಿದರು.

   ಸಂಡೂರಿನ ವಿಠಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರ ಪರವಾಗಿ ಪ್ರಚಾರ ಸಭೆಯಲ್ಲಿ, ತಮ್ಮ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಜನಾರ್ದನರೆಡ್ಡಿಯವರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

    ರೆಡ್ಡಿಯವರೇ, ಕರ್ನಾಟಕ ರಾಜ್ಯ ರಾಜಕಾರಣಕ್ಕೆ ನನ್ನ ಕೊಡುಗೆ ಏನು ? ನಿಮ್ಮ ಕೊಡುಗೆ ಏನು? ನೀವೇನು ಬಳ್ಳಾರಿ ಯಜಮಾನರಾ? ಮತ ಹಾಕುವ ಬಳ್ಳಾರಿಯ ಜನ, ಸಂಡೂರಿನ ಜನ ನಮ್ಮ ಯಜಮಾನರು. ನೆನಪಿರಲಿ. ನಾನು ಗಂಗಾವತಿಗೆ ಪ್ರಚಾರಕ್ಕೆ ಹೋಗಲು ಆಗಲಿಲ್ಲ, ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸರಿಯಾದ ಪ್ರಚಾರ ಮಾಡಲಿಲ್ಲ ಹೀಗಾಗಿ ನೀವು ಗೆದ್ರಿ. ನಿಮ್ಮ ಈ ಗೆಲುವು ಶಾಶ್ವತ ಅಲ್ಲ. ಯಾರ ಗೆಲುವೂ ಶಾಶ್ವತ ಅಲ್ಲ. ನೆನಪಿರಲಿ. ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡುವ ಯೋಗ್ಯತೆ ನಿಮಗಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

   ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ಇರಬಾರದಾ? ನಮ್ಮ ಸರ್ಕಾರ ಇದೆ. ಯಡಿಯೂರಪ್ಪ ಅವರು, ನೀವು ಮಾತನಾಡುತ್ತಿಲ್ಲವಾ ? ನಿಮ್ಮ ಸರ್ಕಾರ ಇದ್ದಾಗ ನನಗೆ ಬಳ್ಳಾರಿಯಲ್ಲಿ ಮಾತನಾಡಲು ಜಾಗ ಕೊಟ್ಟಿರಲಿಲ್ಲ. ನನಗೆ ಕುಡಿಯೋದಕ್ಕೆ ನೀರು ಕೇಳಿದ್ರೂ ಜನ ನೀರು ಕೊಡೋಕೂ ಭಯ ಪಡ್ತಾ ಇದ್ರು. ನಮ್ಮ ಯಜಮಾನರಾದ ಬಳ್ಳಾರಿ ಜನರನ್ನು ಇಷ್ಟು ಭಯದಲ್ಲಿ ಇಟ್ಟಿದ್ರಲ್ಲಾ , ಯಾವ ಮುಖ ಹೊತ್ತುಕೊಂಡು ಇದೇ ಜನರ ಬಳಿ ಮತ ಕೇಳಲು ಬಂದಿದ್ದೀರಿ? ನಾಚಿಕೆ ಆಗೋದಿಲ್ವಾ ನಿಮಗೆ ಎಂದು ಖಾರವಾಗಿ ಪ್ರಶ್ನಿಸಿದರು. 

   ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಇಬ್ಬರೂ ಕೋವಿಡ್ ಸಂದರ್ಭದಲ್ಲಿ ಚೀನಾದಿಂದ ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾ.ಮೈಕೆಲ್ ಕುನ್ಹಾ ಅವರ ತನಿಖಾ ಆಯೋಗ ಪತ್ತೆ ಹಚ್ಚಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ   ನುಡಿದರು.

   ಸಂಡೂರು ವಿಧಾನಸಭಾ ಕ್ಷೇತ್ರದ ಮೆಟ್ರಿಕಿ ಗ್ರಾಮದಲ್ಲಿ ಆಯೋಜಿಸಿದ್ದ ಬೃಹತ್ ಜನಸಮಾವೇಶವದಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆ ಭಯ, ಆತಂಕದಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾಗ ಬಿಜೆಪಿ ಸರ್ಕಾರ ಮತ್ತು ಸಚಿವ ಶ್ರೀರಾಮುಲು ಅವರು ಹಣ ಲೂಟಿ ಮಾಡುವುದರಲ್ಲಿ ಮುಳುಗಿದ್ದರು. ನಮ್ಮ ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿ ಯವರನ್ನು ಯಾವ ದೇವರೂ ಕ್ಷಮಿಸಲ್ಲ. ನೀವೂ ಕ್ಷಮಿಸಬೇಡಿ ಎಂದು ಜನರಿಗೆ ಕರೆ ನೀಡಿದರು.

   ಬಿಜೆಪಿ ಶ್ರೀಮಂತರ ಮತ್ತು ಮೇಲ್ವರ್ಗದವರ ಪಕ್ಷ. ಕಾಂಗ್ರೆಸ್ ಜಾರಿ ಮಾಡುವ ಎಲ್ಲಾ ಬಡವರ ಪರವಾದ ಕಾರ್ಯಕ್ರಮಗಳನ್ನು ವಿರೋಧಿಸುತ್ತದೆ. ಅಪಪ್ರಚಾರ ಮಾಡುತ್ತದೆ. ಆಗ ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸಿ ಅಪಪ್ರಚಾರ ಮಾಡಿತ್ತು. ಈಗ ನಮ್ಮ‌ ಸರ್ಕಾರದ ಐದು ಗ್ಯಾರಂಟಿಗಳನ್ನು ವಿರೋಧಿಸಿ ಅಪಪ್ರಚಾರ ಮಾಡುತ್ತಿದೆ. ಇದೇ ಬಿಜೆಪಿಯ ಜಾಯಮಾನ ಎಂದು ಟೀಕಿಸಿದರು.

   ಬಿಜೆಪಿ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ದಲಿತರು, ಹಿಂದುಳಿದವರ ಪರವಾಗಿ ಒಂದೇ ಒಂದು ಕಾರ್ಯಕ್ರಮ ಕೊಟ್ಟಿದ್ದರೆ ನೆನಪಿಸಿಕೊಂಡು ಹೇಳಿ ನೋಡೋಣ. ಯಾವ ಕಾರ್ಯಕ್ರಮವನ್ನೂ ಕೊಟ್ಟಿಲ್ಲ. ಅದಕ್ಕೇ ನಿಮಗೆ ನೆನಪಾಗ್ತಿಲ್ಲ. ಸಂಡೂರಿನಲ್ಲಿರುವ ರಸ್ತೆ, ಶಾಲೆ, ವಸತಿ ಶಾಲೆ, ಅಂಗನವಾಡಿ, ಆಸ್ಪತ್ರೆ, ನೀರು, ನೀರಾವರಿ ಎಲ್ಲವೂ ಆಗಿರುವುದು ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ. ಬಿಜೆಪಿಯವರು ಕೇವಲ ಸುಳ್ಳು ಹೇಳಿಕೊಂಡು, ಜನರ ನಡುವೆ ದ್ವೇಷ ಬಿತ್ತುತ್ತಾ ರಾಜಕಾರಣ ಮಾಡುತ್ತಿದ್ದಾರೆ ಎಂದರು.

   ಬಿಜೆಪಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಚೀನಾದಿಂದ ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಿ ಎಂದು ನ್ಯಾ.ಕುನ್ಹಾ ಅವರ ತನಿಖಾ ಆಯೋಗ ಪತ್ತೆ ಹಚ್ಚಿದೆ. ಹಿಂದೆ ಜನಾರ್ದನರೆಡ್ಡಿಯವರ ಟೀಮು ನಡೆಸಿದ್ದ ಭ್ರಷ್ಟಾಚಾರವನ್ನು ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಬಯಲಿಗೆ ಎಳೆದಿದ್ದರು. ಇವರು ಅಧಿಕಾರಕ್ಕೆ ಬರೋದೇ ಲೂಟಿ ಮಾಡೋದಕ್ಕೆ. ಆದ್ದರಿಂದ ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಮ್ ಅವರನ್ನು ಗೆಲ್ಲಿಸಿ ಅಭಿವೃದ್ಧಿಗೆ ನಿಮ್ಮ ಬೆಂಬಲ ನೀಡಿ ಎಂದರು. 

   78 ವರ್ಷದ ಸಿದ್ದರಾಮಯ್ಯ ಅವರು 28 ವರ್ಷದ ಯುವಕನ ರೀತಿಯಲ್ಲಿ ದಿನಕ್ಕೆ 12-14 ಗಂಟೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇದ್ದಾಗಲೂ ದಿನಕ್ಕೆ ಏಳು-ಎಂಟು ಅಧಿಕಾರಿಗಳ ಸಭೆ ನಡೆಸ್ತಾರೆ. ಮೂರು ದಿನಗಳಿಂದ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಸಂಡೂರು ಕ್ಷೇತ್ರದಲ್ಲೇ ಸಂಡೂರು ಜನರ ಮನೆ ಬಾಗಿಲಿಗೇ ಬಂದು ಮತ ಕೇಳುತ್ತಿದ್ದಾರೆ. ತಂದೆ ಸಮಾನರಾದ ಸಿಎಂ ಸಿದ್ದರಾಮಯ್ಯ ಅವರು ಅನ್ನಪೂರ್ಣಮ್ಮ ಅವರಿಗೆ ಆಶೀರ್ವಾದ ಮಾಡಿ ಅಂತ ಕೇಳುತ್ತಿದ್ದಾರೆ. ಇವರ ಮಾತು ನೆರವೇರಿಸಲು ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಕರೆ ನೀಡಿದರು.