ಜಸ್​ಪ್ರೀತ್ ಬುಮ್ರಾಗೆ ಕೆರಿಯರ್ ಕೊನೆಗೊಳ್ಳುವ ಭೀತಿ..!

ನವದೆಹಲಿ :   

    ವೇಗಿ ಜಸ್​ಪ್ರೀತ್ ಬುಮ್ರಾ 2022ರ ಟಿ20 ವಿಶ್ವಕಪ್​ಗೆ ಅಲಭ್ಯರಾಗಿದ್ದರು. ಕಾರಣ ಬೆನ್ನು ನೋವಿನ ಸಮಸ್ಯೆ. 2025ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಬುಮ್ರಾ ಕಾಣಿಸಿಕೊಂಡಿರಲಿಲ್ಲ. ಕಾರಣ ಅದೇ ಬೆನ್ನು ನೋವಿನ ಸಮಸ್ಯೆ. ಹೀಗೆ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾಗೆ ಇದೀಗ ವೃತ್ತಿಜೀವನ ಕೊನೆಗೊಳ್ಳುವ ಭೀತಿ ಎದುರಾಗಿದೆ. ಏಕೆಂದರೆ ಇಂತಹದ್ದೇ ಸಮಸ್ಯೆಗೆ ಒಳಗಾಗಿದ್ದ ನ್ಯೂಝಿಲೆಂಡ್​ನ ವೇಗಿ ಶೇನ್ ಬಾಂಡ್ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಕ್ರಿಕೆಟ್​ ಕೆರಿಯರ್​ಗೆ ವಿದಾಯ ಹೇಳಿದ್ದರು.

    ಜಸ್​ಪ್ರೀತ್ ಬುಮ್ರಾ ಈಗ ಎಚ್ಚರಿಕೆವಹಿಸದಿದ್ದರೆ ನನ್ನಂತೆ ದಿಢೀರ್ ವೃತ್ತಿಜೀವನ ಕೊನೆಗೊಳಿಸಬೇಕಾಗಿ ಬರಬಹುದು ಎಂದು ಶೇನ್ ಬಾಂಡ್ ಹೇಳಿದ್ದಾರೆ. ಇಎಸ್‌ಪಿಎನ್-ಕ್ರಿಕ್‌ಇನ್ಫೋ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಬಾಂಡ್, ಬುಮ್ರಾ ಅವರ ಬೆನ್ನಿನ ಒಂದೇ ಭಾಗದಲ್ಲಿ ಸಮಸ್ಯೆ ಎದುರಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ.

   ಏಕೆಂದರೆ ಜಸ್​ಪ್ರೀತ್ ಬುಮ್ರಾ ಮತ್ತೊಮ್ಮೆ ಅದೇ ಸ್ಥಳದಲ್ಲಿ ಗಾಯಗೊಂಡರೆ, ಅದು ಅವರ ವೃತ್ತಿಜೀವನವನ್ನು ಕೊನೆಗೊಳಿಸಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ನೀವು ಮತ್ತೆ ಅದೇ ಸ್ಥಳದಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎಂಬುದನ್ನು. ಹೀಗಾಗಿ ಇನ್ನೊಮ್ಮೆ ಜಸ್​ಪ್ರೀತ್ ಬುಮ್ರಾ ಇದೇ ಬೆನ್ನು ನೋವಿನ ಸಮಸ್ಯೆಗೆ ಒಳಗಾದರೆ ಅವರು ಕ್ರಿಕೆಟ್ ಅಂತ್ಯಗೊಳಿಸಬೇಕಾಗಿ ಬರಬಹುದು ಎಂದು ಶೇನ್ ಬಾಂಡ್ ಹೇಳಿದ್ದಾರೆ.

    ಜಸ್​ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಎರಡು-ಮೂರು ವರ್ಷಗಳ ಹಿಂದೆಯೂ ಬುಮ್ರಾ ಅವರ ಬೆನ್ನಿನ ಮೂಳೆಯಲ್ಲಿ ಸಮಸ್ಯೆ ತಲೆದೂರಿತ್ತು. ಇದರಿಂದಾಗಿ ಅವರು 2022 ರ ಟಿ 20 ವಿಶ್ವಕಪ್‌ ಆಡಿರಲಿಲ್ಲ. ಆ ಬಳಿಕ ನ್ಯೂಝಿಲೆಂಡ್‌ನ ಪ್ರಸಿದ್ಧ ವೈದ್ಯರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲದೆ ಸುಮಾರು ಒಂದು ವರ್ಷ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

   ಇದೀಗ ಮತ್ತದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಒಂದೇ ಕಡೆ ಮತ್ತೆ ಮತ್ತೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಇದರಿಂದ ಬುಮ್ರಾ ಅವರ ಕೆರಿಯರ್ ಅಂತ್ಯದತ್ತ ಸಾಗಬಹುದು. ಹೀಗಾಗಿ ಅವರು ಹೆಚ್ಚಿನ ವಿಶ್ರಾಂತಿಯೊಂದಿಗೆ ಕ್ರಿಕೆಟ್ ವೃತ್ತಿಜೀವನ ಮುಂದುವರೆಸುವುದು ಉತ್ತಮ ಎಂದು ಶೇನ್ ಬಾಂಡ್ ಅಭಿಪ್ರಾಯಪಟ್ಟಿದ್ದಾರೆ. 

   ಶೇನ್ ಬಾಂಡ್ ಅವರ ಪ್ರಕಾರ, ಜಸ್​ಪ್ರೀತ್ ಬುಮ್ರಾ ದೀರ್ಘಕಾಲ ಕ್ರಿಕೆಟ್ ಆಡಬೇಕಿದ್ದರೆ ಅವರು ಒಂದೇ ಬಾರಿಗೆ ಸತತ ಎರಡು ಟೆಸ್ಟ್‌ಗಳಿಗಿಂತ ಹೆಚ್ಚು ಪಂದ್ಯಗಳನ್ನು ಆಡಬಾರದು. ಏಕೆಂದರೆ ಇಲ್ಲಿ ಟೆಸ್ಟ್​ನಲ್ಲಿ ಹೆಚ್ಚು ಓವರ್​ಗಳನ್ನು ಎಸೆಯಬೇಕಾಗುತ್ತದೆ. ಅದಕ್ಕೂ ಮುನ್ನ ಬೌಲಿಂಗ್ ಅಭ್ಯಾಸವನ್ನು ಸಹ ನಡೆಸಬೇಕು. ಅಲ್ಲದೆ ಅವರು ಮೂರು ಫಾರ್ಮ್ಯಾಟ್​ನಲ್ಳೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಬುಮ್ರಾ ಪ್ರತಿ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳ ಬಳಿಕ ವಿಶ್ರಾಂತಿ ಪಡೆಯುವುದು ಉತ್ತಮ ಎಂದು ಶೇನ್ ಬಾಂಡ್ ಹೇಳಿದ್ದಾರೆ.

   ಅಂದಹಾಗೆ ಶೇನ್ ಬಾಂಡ್ ಅವರು ಜಸ್​ಪ್ರೀತ್ ಬುಮ್ರಾ ಅವರ ಬೌಲಿಂಗ್ ಕೋಚ್. ಅಂದರೆ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಬಾಂಡ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಬಾಂಡ್ ಅವರಿಗೆ ಬುಮ್ರಾ ಸಾಮರ್ಥ್ಯ ಹಾಗೂ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವಿರುತ್ತದೆ. ಹೀಗಾಗಿಯೇ ಜಸ್​ಪ್ರೀತ್ ಬುಮ್ರಾ ಅವರನ್ನು ಟೀಮ್ ಇಂಡಿಯಾ ಸತತ ಪಂದ್ಯಗಳಲ್ಲಿ ಕಣಕ್ಕಿಳಿಸಬಾರದೆಂದು ಶೇನ್ ಬಾಂಡ್ ಅಭಿಪ್ರಾಯಪಟ್ಟಿದ್ದಾರೆ.

Recent Articles

spot_img

Related Stories

Share via
Copy link