ಮೈಸೂರು:
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಕೇವಲ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ರಾಜಕೀಯ ಅನುಭವದಿಂದ ಹೇಳುತ್ತಿರುವ ಮಾತು. ಡಿ.ಕೆ ಶಿವಕುಮಾರ್ ಅವರ ಮಾತಲ್ಲಿ ರಾಜಕೀಯ ತಂತ್ರಗಾರಿಕೆ ಇದೆಯಷ್ಟೇ. ಡಿ.ಕೆ ಸುರೇಶ್ ಅವರನ್ನು ಸ್ಪರ್ಧೆಗೆ ಇಳಿಸುವ ದೃಷ್ಟಿಯಿಂದ ನಾನು ಬಂದರೆ ಮತ ಹಾಕುತ್ತೀರಾ ಎಂದು ಜನರನ್ನು ಕೇಳುತ್ತಿದ್ದಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ನಾನೇ ಸ್ಪರ್ಧೆ ಮಾಡುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಜನಗಳ ಅಭಿಪ್ರಾಯ ನನ್ನ ಪರವಾಗಿದ್ದಾರೆ ಎಂದಷ್ಟೇ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ. ಅಂತಿಮವಾಗಿ ಮೈತ್ರಿ ನಾಯಕರು ಕುಳಿತು ತೀರ್ಮಾನ ಮಾಡುತ್ತೇವೆ. ಎಲ್ಲಾ ಉಪಚುನಾವಣೆಗಳು ಸರ್ಕಾರದ ಪರವಾಗಿಯೇ ಇರುವುದಿಲ್ಲ. ಒಂದೊಂದು ಬಾರಿ ಒಂದೊಂದು ಟ್ರೆಂಡ್ ನಡೆಯುತ್ತದೆ ಎಂದರು. ನಮ್ಮ ಅಭ್ಯರ್ಥಿ ಯಾರು ಎಂಬುದನ್ನು ನಾವಿನ್ನೂ ತೀರ್ಮಾನ ಮಾಡಿಲ್ಲ. ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ ನಾನೇ ಅದನ್ನು ಹೇಳುತ್ತೇನೆ. ಕೋರ್ ಕಮಿಟಿಯ ಅಧ್ಯಕ್ಷ ನಾನೇ ಆಗಿರುವ ಕಾರಣ ಅಭ್ಯರ್ಥಿ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯ ಹೇಳಲು ಬರುವುದಿಲ್ಲ ಎಂದು ಜಿ.ಟಿ ದೇವೇಗೌಡ ಹೇಳಿದ್ದಾರೆ.