ಸಿಕ್ಕೀತೇ ರಾಜ್ಯಕ್ಕೆ ನ್ಯಾಯ? ಕೇಂದ್ರ ಬಜೆಟ್‌ನಲ್ಲಿ ಕನ್ನಡಿಗರ ಹಲವು ನಿರೀಕ್ಷೆ

ಬೆಂಗಳೂರು:ಸಿಕ್ಕೀತೇ ರಾಜ್ಯಕ್ಕೆ ನ್ಯಾಯ? ಕೇಂದ್ರ ಬಜೆಟ್‌ನಲ್ಲಿ ಕನ್ನಡಿಗರ ಹಲವು ನಿರೀಕ್ಷೆ

     ರಾಜ್ಯದ ಪಾಲಿನ ಜಿಎಸ್‌ಟಿ ಪರಿಹಾರ ಸಿಕ್ಕೀತೇ? ಕೃಷ್ಣ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಗೆ ರಾಷ್ಟ್ರೀಯ ಮಾನ್ಯತೆ ದೊರೆಯಬಹುದೇ? ರಾಜ್ಯದ ಪಾಲಿನ ಅನುದಾನ ಹೆಚ್ಚಳವಾದೀತೇ? ಹೊಸ ರೈಲ್ವೇ ಯೋಜನೆಗಳೇನಾದರೂ ಘೋಷಣೆಯಾಗಲಿವೆಯೇ?

   ಇಂಥ ಹಲವಾರು ನಿರೀಕ್ಷೆಗಳೊಂದಿಗೆ ರಾಜ್ಯವು ಕೇಂದ್ರದ ಬಜೆಟ್‌ ಅನ್ನು ಎದುರು ನೋಡುತ್ತಿದೆ. ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ನಲ್ಲಿ ರಾಜ್ಯಕ್ಕೆ ಭರಪೂರ ಯೋಜನೆಗಳು ಹರಿದುಬರಬಹುದು. ಜತೆಗೆ ಮುಂದಿನ ವರ್ಷವೇ ರಾಜ್ಯದಲ್ಲಿ ಚುನಾವಣೆ ಇರುವುದರಿಂದ ದೊಡ್ಡ ಕೊಡುಗೆಗಳ ನಿರೀಕ್ಷೆ ಜನರಲ್ಲಿದೆ.

ಜಿಎಸ್‌ಟಿ ಪರಿಹಾರ ಹೆಚ್ಚಳ

ಪ್ರಮುಖವಾಗಿ ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಒದಗಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಒಂದು, ದೇಶದ ಶೇ 48 ರಷ್ಟು ಜಿಎಸ್‌ಟಿ ಹಣವನ್ನು ದಕ್ಷಿಣದ ನಾಲ್ಕು ರಾಜ್ಯಗಳು ನೀಡುತ್ತಿವೆ. ಕೇಂದ್ರ ಸರ್ಕಾರ ಜನಸಂಖ್ಯೆ ಆಧಾರದಲ್ಲಿ ಜಿಎಸ್‌ಟಿ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದ್ದು, ರಾಜ್ಯಕ್ಕೆ ಒಂದು ರೂಪಾಯಿಯಲ್ಲಿ 40 ಪೈಸೆ ದೊರೆಯುತ್ತಿದೆ.

ಉತ್ತರ ರಾಜ್ಯಗಳಾದ ಯುಪಿಗೆ 4.80 ರೂ. ಬಿಹಾರ್‌ಗೆ 3.60 ರೂ. ದೊರೆಯುತ್ತಿದೆ. ಇದರಿಂದ ರಾಜ್ಯದ ಆದಾಯ ಬೇರೆ ರಾಜ್ಯಗಳ ಪಾಲಾಗುತ್ತಿದ್ದು, ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ರಾಜ್ಯದ ಪಾಲಿನ ಜಿಎಸ್‌ಟಿ ಪರಿಹಾರ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ. ಈ ಬಜೆಟ್‌ನಲ್ಲಿ ಹೆಚ್ಚಿನ ಜಿಎಸ್‌ಟಿ ಪರಿಹಾರ ದೊರೆಯುವ ನಿರೀಕ್ಷೆ ಇದೆ.

ಪರ್ಯಾಯ ಆದಾಯದ ನಿರೀಕ್ಷೆ

15 ನೇ ಹಣಕಾಸು ಆಯೋಗ ಬಂದ ನಂತರ ರಾಜ್ಯಕ್ಕೆ ಬರುವ ಆದಾಯದ ಪ್ರಮಾಣ ಕಡಿಮೆಯಾಗಿದೆ. ಶೇಕಡಾ 10 ರಷ್ಟು ರಾಜ್ಯಕ್ಕೆ ಬರುವ ಪಾಲು ಕಡಿಮೆಯಾಗಿದ್ದು, ಅದನ್ನು ಕೇಂದ್ರ ಸರ್ಕಾರ ಬೇರೆ ಯೋಜನೆಗಳ ಮೂಲಕ ಪರ್ಯಾಯವಾಗಿ ರಾಜ್ಯಕ್ಕೆ ನೆರವು ನೀಡಬೇಕೆಂಬ ಬೇಡಿಕೆ.

ಕರ್ನಾಟಕ ಸರ್ಕಾರದ ಆದಾಯ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದು, ಕರ್ನಾಟಕ ಸರ್ಕಾರ ಅಭಿವೃದ್ಧಿ ಯೋಜನೆಗಳು ಮತ್ತು ರಾಜ್ಯ ನಿರ್ವಹಣೆಗೆ 4 ಲಕ್ಷ ಕೋಟಿ ಸಾಲ ಮಾಡಿದೆ. ಎರಡು ವರ್ಷದಲ್ಲಿ 86 ಸಾವಿರ ಕೋಟಿ ಬಡ್ಡಿ ಕಟ್ಟಲಾಗಿದೆ. ಅದ್ದರಿಂದ ರಾಜ್ಯಕ್ಕೆ ಪರ್ಯಾಯ ಆರ್ಥಿಕ ಸಹಾಯ ಮಾಡಬೇಕೆಂಬ ಬೇಡಿಕೆ ರಾಜ್ಯ ಸರ್ಕಾರದ್ದಾಗಿದೆ.

ಪ್ರವಾಹ ಪರಿಹಾರದ ನಿರೀಕ್ಷೆ

ರಾಜ್ಯದಲ್ಲಿ ಸತತ ಮೂರು ವರ್ಷಗಳಿಂದ ಪ್ರವಾಹ ಉಂಟಾಗಿದ್ದು, ಕೇಂದ್ರದ ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ರಾಜ್ಯ ಸರ್ಕಾರಕ್ಕೆ 62 ಸಾವಿರ ಕೋಟಿ ಪರಿಹಾರ ಬರಬೇಕಿತ್ತು. ಆದರೆ, ಇಲ್ಲಿವರೆಗೂ ಮೂರು ವರ್ಷದಲ್ಲಿ 3200 ಕೋಟಿ ಮಾತ್ರ ಬಿಡುಗಡೆ ಮಾಡಿದ್ದು, ಇದರಿಂದ ಪ್ರವಾಹಕ್ಕೆ ಸಿಲುಕಿ ಮನೆ ಹಾಗೂ ಆಸ್ತಿ ಪಾಸ್ತಿ ಕಳೆದುಕೊಂಡವರನ್ನು ಪುನರ್‌ ವಸತಿ ಮಾಡಲು ಕೇಂದ್ರದ ಹಣಕಾಸಿನ ನೆರವಿನ ಅಗತ್ಯವಿದೆ. ಎನ್‌ಡಿಆರ್‌ಎಫ್ ಪ್ರವಾಹ ಪರಿಹಾರದ ಹಣವನ್ನು ಪುನರ್ವಸತಿ ಯೋಜನೆಗಳಿಗೆ ಅನುದಾನ ನೀಡಬೇಕೆಂಬ ಬೇಡಿಕೆ ಹಾಗೂ ನಿರೀಕ್ಷೆ ಇದೆ.

ಪ್ರಧಾನ ಮಂತ್ರಿ ಫ‌ಸಲ್‌ಭಿಮಾ ಯೋಜನೆ ಪರಿಹಾರ

ರೈತರಿಗೆ ಅನುಕೂಲ ಕಲ್ಪಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫ‌ಸಲ್‌ ಭಿಮಾ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಗೆ ರಾಜ್ಯದ ರೈತರು ಕಳೆದ ವರ್ಷ 26 ಸಾವಿರ ಕೋಟಿ ರೂ. ತಮ್ಮ ಪಾಲಿನ ವಂತಿಗೆ ಕಟ್ಟಿದ್ದಾರೆ. ಆದರೆ, ವಿಮಾ ಕಂಪನಿಯಿಂದ ರೈತರಿಗೆ ಕೇವಲ 4000 ಕೋಟಿ ಮಾತ್ರ ನೀಡಲಾಗಿದೆ. ಇದರಿಂದ ರೈತರಿಗೆ ಅನುಕೂಲಕ್ಕಿಂತ ನಷ್ಟವೇ ಆಗಿದೆ. ಹೀಗಾಗಿ ಈ ಯೋಜನೆ ಮೂಲಕ ರೈತರಿಗೆ ವಿಮಾ ಹಣ ದೊರಕಿಸಿಕೊಡುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಘೋಷಣೆಯಾಗುತ್ತದೆ ಎಂಬ ನಿರೀಕ್ಷೆ ಇದೆ.

ರಾಷ್ಟ್ರೀಯ ಹೆದ್ದಾರಿಗಳ ಪಾಲು

ರಾಷ್ಟ್ರೀಯ ಹೆದ್ದಾರಿಗೆ ನಮ್ಮ ರಾಜ್ಯದ ಯೋಜನೆಗಳಿಗೆ ಸಂಪೂರ್ಣ ಹಣ ಬಿಡುಗಡೆಡಯಾಗಿಲ್ಲ. ಕಳೆದ ಮೂರು ವರ್ಷದಲ್ಲಿ ಶೇ 60 ರಷ್ಟು ಹಣ ಮಾತ್ರ ಬಂದಿದೆ. ಕೊರೊನಾ ಹೆಸರಿನಲ್ಲಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳನ್ನು ಘೋಷಣೆ ಮಾಡಿದ್ದರೂ, ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಈ ಬಜೆಟ್‌ನಲ್ಲಿ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ದೊರೆಯಲಿದೆ ಎಂಬ ನಿರೀಕ್ಷಿ ಇದೆ.

ಬಿಸಿಯೂಟ ಯೋಜನೆಗೆ ಅನುದಾನ ನಿರೀಕ್ಷೆ

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕಳೆದ ಮೂರು ವರ್ಷದಿಂದ ಕೇಂದ್ರದಿಂದ ಬರುವ ಹಣ ಬರುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರದ ಮೇಲೆ ಸಂಪೂರ್ಣ ಆರ್ಥಿಕ ಹೊರೆಯಾಗುತ್ತಿದೆ. ಅದನ್ನು ನಿಭಾಯಿಸಲು ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುವಂತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಬಿಸಿಯೂಟ ಯೋಜನೆಗೆ ಅನುದಾನದ ಭರವಸೆ ನೀಡುವ ನೀರಿಕ್ಷೆ ಇಟ್ಟುಕೊಳ್ಳಲಾಗಿದೆ.

ಆರೋಗ್ಯ ಕ್ಷೇತ್ರಕ್ಕೆ ಬೇಡಿಕೆ

ಕೊರೋನಾ ಸಾಂಕ್ರಾಮಿಕದ ಮೂರನೇ ಅಲೆ ಬಂದಿರುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಆಕ್ಸಿಜನ್‌ ಘಟಕ, ಪಿಎಚ್‌ಸಿಗಳಲ್ಲಿ ವೆಂಟಿಲೇಟರ್‌ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುವ ಭರವಸೆ ಇಟ್ಟುಕೊಳ್ಳಲಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದಿಂದ ಹೆಚ್ಚಿನ ಅನುದಾನದ ನಿರೀಕ್ಷೆ ಇಟ್ಟುಕೊಂಡಿದೆ.

ನೀರಾವರಿಗೆ ನಿರೀಕ್ಷೆ

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಬಹಳಷ್ಟು ನಿರೀಕ್ಷೆಗಳನ್ನು ರಾಜ್ಯ ಸರ್ಕಾರ ಇಟ್ಟುಕೊಂಡಿದೆ. ವಿಶೇಷವಾಗಿ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳನ್ನಾಗಿ ಘೋಷಣೆ ಮಾಡಲಾಗುತ್ತದೆ ಎಂಬ ನೀರೀಕ್ಷೆ ಇದೆ. ಇದರಿಂದ ಎರಡೂ ಯೋಜನೆಗಳಿಗೂ ಒಟ್ಟು ಯೋಜನಾ ವೆಚ್ಚದ ಶೇ 60 ರಷ್ಟು ಹಣಕಾಸಿನ ನೆರವು ಕೇಂದ್ರ ಸರ್ಕಾರದಿಂದ ದೊರೆಯಲಿದೆ.

ಜೊತೆಗೆ ಮೇಕೆದಾಟು ಹಾಗೂ ಮಹದಾಯಿ ಯೋಜನೆಗಳಿಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ನೀಡುವ ಬಗ್ಗೆ ಬಜೆಟ್‌ನಲ್ಲಿ ಭರವಸೆ ನೀಡಬಹುದೆಂಬ ನಿರೀಕ್ಷೆ ರಾಜ್ಯದ್ದಾಗಿದೆ.

ವಿವಿಧ ವಲಯದಲ್ಲಿ ರಾಜ್ಯಕ್ಕೆ ಬಹಳಷ್ಟು ನಿರೀಕ್ಷೆಗಳಿವೆ, ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳು, ಜಿಎಸ್‌ಟಿ ಪರಿಹಾರ ಹೆಚ್ಚಳ ಮಾಡುವ ನಿರೀಕ್ಷೆಯಲ್ಲಿ ನಾವಿದ್ದೇವೆ. ಈ ಸರಿ ನಾವು ಆಶಾದಾಯಕವಾಗಿದ್ದೇವೆ.

-ಜಿ.ಸಿ. ಚಂದ್ರಶೇಖರ, ರಾಜ್ಯಸಭಾ ಸದಸ್ಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap