ಕ್ಯಾಲಿಫೋರ್ನಿಯಾ
ಕೆಲ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಉತ್ತೇಜಿಸಲು ಷೇರುಗಳನ್ನು ನೀಡಲಾಗುತ್ತದೆ. ಈ ರೀತಿ ಷೇರುಗಳನ್ನು ಹೊಂದಿದವರ ಅದೃಷ್ಟ ಖುಲಾಯಿಸಿದರೆ ಕೋಟ್ಯಾಧೀಶ್ವರರಾಗುವುದುಂಟು. ಈ ರೀತಿ ಕಂಪನಿ ಷೇರುಗಳ ಮೂಲಕ ಶ್ರೀಮಂತರಾದವರ ಉದಾಹರಣೆ ಹಲವುಂಟು. ಆ್ಯಪ್ಡೈನಾಮಿಕ್ಸ್ ಎಂಬ ಸಂಸ್ಥೆಯ 400 ಉದ್ಯೋಗಿಗಳು ಕೋಟ್ಯಾಧೀಶ್ವರರಾಗಿದ್ದುಂಟು. ಈ ಕಂಪನಿಯ ಸಂಸ್ಥಾಪಕರಾದ ಜ್ಯೋತಿ ಬನ್ಸಾಲ್ ಭಾರತ ಮೂಲದವರು. 2017ರಲ್ಲಿ ಸಿಸ್ಕೋ ಸಂಸ್ಥೆಗೆ ಆ್ಯಪ್ ಡೈನಾಮಿಕ್ಸ್ ಕಂಪನಿಯನ್ನು ಮಾರಿದ್ದರು. ನೋಡನೋಡುತ್ತಿದ್ದಂತೆಯೇ, ಕಂಪನಿಯ ಷೇರು ಮೌಲ್ಯ ಸಖತ್ತಾಗಿ ಬೆಳೆದು, ಪೂರ್ವದಲ್ಲೇ ಷೇರು ಹೊಂದಿದ ಉದ್ಯೋಗಿಗಳಿಗೆ ಶ್ರೀಮಂತಿಕೆ ತಂದುಕೊಟ್ಟಿತ್ತು.
ಸಿಸ್ಕೋಗೆ ಮಾರಾಟವಾದ ಬಳಿಕ ಆ್ಯಪ್ ಡೈನಾಮಿಕ್ಸ್ ಸಂಸ್ಥೆಯ ಷೇರುಗಳು ಭರ್ಜರಿ ಮೌಲ್ಯ ಪಡೆದುಕೊಂಡವು. 350ಕ್ಕೂ ಹೆಚ್ಚು ಉದ್ಯೋಗಿಗಳು ಕನಿಷ್ಠ ಒಂದು ಮಿಲಿಯನ್ ಡಾಲರ್ನಷ್ಟಾದರೂ ಸಂಪತ್ತು ಗಿಟ್ಟಿಸಿಕೊಂಡರು.
ಹತ್ತಕ್ಕೂ ಹೆಚ್ಚು ಮಂದಿಯ ಷೇರುಗಳ ಮೌಲ್ಯ ಐದು ಮಿಲಿಯನ್ ಡಾಲರ್ಗೂ ಹೆಚ್ಚಾಗಿ ಹೋಗಿತ್ತು. ಈ 400 ಮಂದಿ ಉದ್ಯೋಗಿಗಳು ಶ್ರೀಮಂತರಾಗಿ ಹೋಗಿದ್ದರು. ಭಾರತ ಮೂಲದವರೇ ಆದ ಇನ್ನೊಬ್ಬ ಸಿಇಒ ಜಯ್ ಚೌಧರಿ ಕೂಡ ಹೀಗೆಯೇ ತಮ್ಮ ಕಂಪನಿಯನ್ನು ಮಾರಿ ಉದ್ಯೋಗಿಗಳನ್ನು ಶ್ರೀಮಂತರನ್ನಾಗಿಸಿದ್ದುಂಟು. ಇವರು ಸಂಸ್ಥಾಪಿಸಿದ ಝಡ್ಸ್ಕೇಲರ್ ಅನ್ನು ವೆರಿಸೈನ್ ಎನ್ನುವ ಕಂಪನಿಗೆ ಮಾರಿದ್ದರು. ಅದಾಗಿ ಎರಡು ವರ್ಷಕ್ಕೆ ವೆರಿಸೈನ್ ಷೇರುಬೆಲೆ ಸಖತ್ತಾಗಿ ಏರಿತ್ತು. ಝಡ್ಸ್ಕೇಲರ್ನಲ್ಲಿದ್ದ 80 ಉದ್ಯೋಗಿಗಳ ಪೈಕಿ 70 ಮಂದಿಗೆ ಷೇರುಗಳನ್ನು ಹಂಚಲಾಗಿತ್ತು. ಅವರೆಲ್ಲರೂ ಶ್ರೀಮಂತರಾಗಿ ಹೋಗಿದ್ದರು.
