ನವದೆಹಲಿ
ಹಳೆ ಸಂಸತ್ ಕಟ್ಟಡದ ಸೆಂಟ್ರಲ್ ಹಾಲ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದಿದ್ದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪಕ್ಕದಲ್ಲಿ ಕುಳಿತುಕೊಂಡು ನಿರಂತವಾರವಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಯಾವ ವಿಚಾರ ಕುರಿತು ಮಾತುಕತೆ ನಡೆಸಿದ್ದಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರೊಂದಿಗೆ ಕುಳಿತಿದ್ದ ಸೋನಿಯಾಗಾಂಧಿ. ಸಿಂಧಿಯಾ ಅವರನ್ನು ನಿಲ್ಲಿಸಿ ಮಾತನಾಡಿದ್ದಾರೆ. ನಂತರ ಅವರು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರ ಪಕ್ಕದಲ್ಲಿ ಕುಳಿತರು.
ಸ್ವಲ್ಪ ಸಮಯದ ನಂತರ, ಖರ್ಗೆ ಮತ್ತು ಚೌಧರಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆಯ ನಾಯಕ ಪಿಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಲು ತಮ್ಮ ಸ್ಥಾನಗಳನ್ನು ತೊರೆದಾಗ, ಸಿಂಧಿಯಾ ಗಾಂಧಿ ಬಳಿ ಕುಳಿತುಕೊಳ್ಳಲು ತೆರಳಿದರು.
