ನವದೆಹಲಿ:
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದ ನಂತರ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರು ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಆದೇಶ ನೀಡಿತ್ತು. ಮಹಿಳಾ ಜಾಮೀನಿಗೆ ಸಂಬಂಧಿಸಿದ ಶಾಸನಬದ್ಧ ನಿಬಂಧನೆಗಳ ಆಧಾರದ ಮೇಲೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್‌ನ ತೀರ್ಪು ದೋಷಪೂರಿತವಾಗಿದ್ದು, ಅದನ್ನು ರದ್ದುಗೊಳಿಸಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.ದೆಹಲಿ ಅಕ್ರಮ ಲಿಕ್ಕರ್ ಹಗರಣದಲ್ಲಿ ಕಳೆದ ಮಾರ್ಚ್ 15ರಂದು ವಿಧಾನ ಪರಿಷತ್ ಸದಸ್ಯೆ ಕೆ ಕವಿತಾ ಬಂಧಿಸಲ್ಪಟ್ಟಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾನೂನು ಮೇಲುಗೈ ಸಾಧಿಸಿದೆ. ಕಾನೂನು ಕ್ರಮ ಕೈಗೊಳ್ಳುತ್ತದೆ. ಇದು ದೋಷಪೂರಿತ ಪ್ರಕರಣ ಎಂದು ಇಡೀ ದೇಶಕ್ಕೆ ತಿಳಿದಿದೆ ಎಂದರು.