ತುಮಕೂರು :
ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲು ಇನ್ನಿಲ್ಲದ ಪ್ರಯತ್ನಗಳು ಸಾಗುತ್ತಿವೆ ಎನ್ನುವುದಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿಎಂ ವಿರುದ್ಧ ಅಸಮಾಧಾನವ್ಯಕ್ತಪಡಿಸಿ ಬರೆದಿರುವ ಪತ್ರವೇ ನಿದರ್ಶನ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ಅವರು ಸಂಪುಟದರ್ಜೆ ಸಚಿವರಾಗಿ ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಸರಿಯಾದ ಕ್ರಮವಲ್ಲ. ಕ್ಯಾಬಿನೆಟ್‍ನೊಳಗೆ ಈ ಸಂಬಂಧ ಚರ್ಚಿಸಲು ಅವಕಾಶವಿ. ಆದರೆ ಬಹಿರಂಗವಾಗಿ ಮುಖ್ಯಮಂತ್ರಿ ಪರಮಾಧಿಕಾರವನ್ನು ಪ್ರಶ್ನಿಸಿ ರಾಜ್ಯಪಾಲರು, ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದಾರೆ. ಈ ಬೆಳವಣಿಗೆಗಳನ್ನು ನೋಡಿದರೆ ಮೇಲ್ನೋಟಕ್ಕೆ ಅನುದಾನ ಹಂಚಿಕೆ ಅಸಮಾಧಾನವೆಂದು ತೋರಿದರೂ, ಇದರ ಹಿಂದೆ ಬಿಎಸ್‍ವೈ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂಬ ಬಿಜೆಪಿ, ಸಂಘ ಪರಿವಾರದೊಳಗಿನ ಷಡ್ಯಂತ್ರಗಳು ಗೋಚರಿಸುತ್ತಿದೆ. ಯತ್ನಾಳ್ ಹೇಳಿಕೆಗಳಿಗೆ ಪೂರಕವಾಗಿ ಸಂಘ ನಿಷ್ಟ ಈಶ್ವರಪ್ಪ ನಡೆಯಿರವುದು ಯಾವ ಸಂದರ್ಭದಲ್ಲಿ ಬೇಕಾದರೂ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಲಕ್ಷಣಗಳು ಕಾಣುತ್ತಿವೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಬಿ.ಎಸ್‍ವೈ ರಾಜೀನಾಮೆ ಪ್ರಹಸನ ಮತ್ತೆ ಚಾಲ್ತಿಗೆ ಬಂದಿದೆ. ಉಪಚುನಾವಣೆಗಳು ಮುಗಿದ ಬಳಿಕ ನಾಯಕತ್ವ ಬದಲಾಗಬಹುದು ಎಂದರು.
ಎತ್ತಿನಹೊಳೆ ಯೋಜನೆ ಮತ್ತಷ್ಟು ವಿಳಂಬ:
12,912 ಕೋಟಿ ವೆಚ್ಚದಲ್ಲಿ ಕೈಗೊಂಡ ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆಯ 34 ಹಾಗೂ ಮಧುಗಿರಿಯ 54 ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದ್ದು, ಐದು ಜಿಲ್ಲೆಗಳಿಗೆ 24 ಟಿಎಂಸಿ ನೀರು ಹರಿಸುವ ಯೋಜನೆಗೆ ಈವರೆಗೆ ಕೇವಲ 4000 ಕೋಟಿ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ. ಹಾಲಿ ಬಜೆಟ್‍ನಲ್ಲೂ 500 ಕೋಟಿ ಮಾತ್ರ ತೆಗೆದಿರಿಸಿದ್ದು, ಹೀಗಾದರೆ ಕಾಮಗಾರಿ ಮುಗಿಯುವುದಾದರೂ ಯಾವಾಗ? ಕೊರಟಗೆರೆ ತಾಲೂಕು ಬೈರಗೊಂಡ್ಲು ನಿರ್ಮಿಸುತ್ತಿರುವ ಬಫರ್‍ಡ್ಯಾಂಗೆ 4750 ಎಕರೆ ಜಮೀನು 9 ಹಳ್ಳಿಗಳು ಮುಳುಗಡೆಯಾಗಲಿವೆ. ಇದಕ್ಕೆ ಪರಿಹಾರ, ಪುನರ್ವಸತಿ ಕಲ್ಪಿಸಲು ಹಣ ಬೇಡವೆ. ಈ ಡ್ಯಾಂಗೆ ಜಮೀನು ಬಿಟ್ಟುಕೊಡುವ ರೈತರು ದೊಡ್ಡಬಳ್ಳಾಪುರ, ಕೊರಟಗೆರೆ, ಮಧುಗಿರಿ ಭಾಗದ ರೈತರಾಗಿದ್ದು, ನಮ್ಮ ಜಿಲ್ಲೆಯ ಭಾಗದಲ್ಲಿ ಎಕರೆಗೆ 8 ಲಕ್ಷ ನಿಗದಿಮಾಡಿದರೆ, ದೊಡ್ಡಬಳ್ಳಾಪುರ ಭಾಗಕ್ಕೆ 35 ಲಕ್ಷ ನಿಗದಿ ಮಾಡಲಾಗಿದೆ. ಪರಿಹಾರದಲ್ಲಿ ಇಷ್ಟು ತಾರತಮ್ಯ ಮಾಡಿದರೆ ಯಾವ ರೈತರು ಜಮೀನು ಕೊಡುತ್ತಾರೆ. ಯೋಜನೆ ಯಾವರೀತಿ ತ್ವರಿತಗತಿಯಲ್ಲಿ ಅನುಷ್ಟಾನಗೊಳ್ಳುತ್ತದೆ ಎಂದು ಪ್ರಶ್ನಿಸಿದರು.
ಸಾಲ ಮನ್ನಾ ಹಣ ಬರಬೇಕಿದೆ: ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಕೃಷಿ ಸಾಲ ಮನ್ನಾ ಯೋಜನೆಯಡಿಯ ಅನುದಾನ ಇನ್ನೂ ಡಿಸಿಸಿ ಬ್ಯಾಂಕ್‍ಗಳಿಗೆ ಬಾಕಿ ಇದ್ದು, ಸರಕಾರ ಬದ್ದತೆಯಿಂದ ಬಿಡುಗಡೆಮಾಡಲೇಬೇಕಾದ ಹಣ ಇದಾಗಿದೆ ಎಂದರು.
ನೀರಿನ ಸಮರ್ಪಕ ಹಂಚಿಕೆ, ಸದ್ಬಳಕೆಯಾಗಲಿ
ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಿದೆ. ಮಧುಗಿರಿ ತಾಲೂಕೊಂದರಲ್ಲೇ 90 ಗ್ರಾಮಗಳಲ್ಲಿ ಮುಂದೆ ನೀರಿನ ಸಮಸ್ಯೆ ಉದ್ಬವಿಸಬಹುದೆಂದು ಅಂದಾಜಿಸಲಾಗಿದ್ದು, ಹೊಸ ಕೊಳವೆಬಾವಿ ಕೊರೆಸಲು, ವಿಫಲಗೊಂಡಿರುವ ಕೊಳವೆಬಾವಿ ದುರಸ್ಥಿಗೆ ಹಣ ಮೀಸಲಿರಿಸಬೇಕು. ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಮೇವು, ನೀರು ಒದಗಿಸುವುದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಆದ್ಯತೆಯಾಗಬೇಕು. ಸ್ಥಳೀಯವಾಗಿ ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಬೇಕು. ಉದಾಹರಣೆಗೆ ಬೋರನಕಣಿವೆ ಜಲಾಶಯದಲ್ಲಿ ನೀರಿದ್ದರೂ, ಹುಳಿಯಾರಿಗೆ ಕೊಡಲಾಗದ ಆಡಳಿತ ವ್ಯವಸ್ಥೆಗೆ ಏನನ್ನಬೇಕು ಎಂದು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ