k-ride ನಿಂದ ಸಬ್‌ ಅರ್ಬನ್‌ ಕೋಚ್‌ ನಿರ್ಮಾಣ ….!

ಬೆಂಗಳೂರು

    ಬೆಂಗಳೂರು ಉಪನಗರ ರೈಲು ಯೋಜನೆಯಡಿ ರೈಲು ಬೋಗಿಗಳನ್ನು ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ, ಯಾವುದೇ ಕಂಪನಿಗಳು ಮುಂದೆ ಬಾರದ ಹಿನ್ನೆಲೆಯಲ್ಲಿ, ಕೆ- ರೈಡ್ (ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ) ತಾನೇ ರೈಲ್ವೆ ಕೋಚ್​ಗಳನ್ನು ನಿರ್ಮಾಣ ಮಾಡಲು ತಿರ್ಮಾನ ಮಾಡಿದೆ. 306 ಕೋಚ್​ಗಳನ್ನು ಕೆ- ರೈಡ್ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. 2135 ಕೋಟಿ ರೂಪಾಯಿ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

    ಸಬ್ ಅರ್ಬನ್ ರೈಲ್ವೆ ಯೋಜನೆಯ ಎರಡನೇ ಕಾರಿಡಾರ್ ಅನ್ನು 2026ರ ಡಿಸೆಂಬರ್ ಹಾಗೂ 4ನೇ ಕಾರಿಡಾರ್‌ ಅನ್ನು 2027ರ ಡಿಸೆಂಬರ್ ವೇಳೆಗೆ ಕಾರ್ಯಾಚರಣೆ ಪ್ರಾರಂಭಿಸಲು ನಿರ್ಧರಿಸಲಾಗಿತ್ತು.

    ರೈಲ್ವೆ ಕೋಚ್‌ಗಳ ನಿರ್ಮಾಣಕ್ಕೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ, ಯಾವುದೇ ಕಂಪನಿಗಳು ಭಾಗವಹಿಸಿಲ್ಲ. ಹೀಗಾಗಿ 4,300 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ 50 ರಷ್ಟು ಅನುದಾನ ನೀಡಿ ಕೆ-ರೈಡ್ ಮೂಲಕವೇ ಕೋಚ್​ಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಸಚಿವ ಹೆಚ್​ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ. 

   ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ 406 ಕೋಚ್‌ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 2,135 ಕೋಟಿ ರೂಪಾಯಿಗಳನ್ನು ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಒದಗಿಸಲು ಸರ್ಕಾರ ಒಪ್ಪಿಗೆ ನೀಡಿದೆ‌. ಮುಂದಿನ ಹಂತದಲ್ಲಿ ಕೇಂದ್ರ ಸರ್ಕಾರಕ್ಕೆ ಅನುದಾನ ಮತ್ತು ಅನುಮತಿಗಾಗಿ ಪತ್ರ ಬರೆಯಲಾಗುತ್ತದೆ. ಕೇಂದ್ರದಿಂದ ಒಪ್ಪಿಗೆ ಸಿಕ್ಕಿದ ಕೂಡಲೇ ರೈಲ್ವೆ ಕೋಚ್​ಗಳ ನಿರ್ಮಾಣ ಕಾರ್ಯ ಶುರುವಾಗಲಿದೆ.

    ಕೋಚ್ ನಿರ್ಮಾಣ ಬಗ್ಗೆ ಟ್ರಾನ್ಸ್‌ಪೋರ್ಟ್‌ ತಜ್ಞ ಪ್ರೊ. ಶ್ರೀಹರಿ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದವರು ರೀ ಟೆಂಡರ್ ಮಾಡಬೇಕು. ಯಾಕೆ ಯಾವುದೇ ಕಂಪನಿಗಳು ಟೆಂಡರ್​ನಲ್ಲಿ ಭಾಗಿಯಾಗಿಲ್ಲ ಎಂದು ಪರಿಶೀಲಿಸಬೇಕು. ಬೆಂಗಳೂರಿನಲ್ಲಿರುವ ಕೋಚ್ ತಯಾರಿಕಾ ಕಂಪನಿಗಳು ಟೆಂಡರ್​ನಲ್ಲಿ ಭಾಗಿಯಾಗಿಲ್ಲ ಅಂದರೆ ಏನರ್ಥ? ನಾವು ಕೋಚ್ ನಿರ್ಮಾಣ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಇತಿಹಾಸ ಇರಬೇಕು. ಹಿಂದೆ ತಯಾರು ಮಾಡಿರುವ ಅನುಭವ ಇರಬೇಕು ಎಂದಿದ್ದಾರೆ. 

   ಒಟ್ಟಿನಲ್ಲಿ ಸಬ್ ಅರ್ಬನ್ ರೈಲುಗಳು ನಗರದಲ್ಲಿ ಆದಷ್ಟು ಬೇಗ‌ ಸಂಚಾರ ಮಾಡಬೇಕು ಎಂಬ ಕನಸು ನಗರದ ಪ್ರಯಾಣಿಕರಿಗಿದೆ. ಆದರೆ, ಕೋಚ್ ನಿರ್ಮಾಣಕ್ಕೆ ಕರೆದಿದ್ದ ಟೆಂಡರ್​​ನಲ್ಲಿ ಯಾವುದೇ ಕಂಪನಿಗಳು ಭಾಗಿಯಾಗದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯ ಸರ್ಕಾರದ ಗ್ರೀನ್ ಸಿಗ್ನಲ್ ಬಳಿಕವಾದರೂ ತ್ವರಿತಗತಿಯಲ್ಲಿ ಕೆಲಸ ಕಾರ್ಯಗಳು ನಡೆದು ಉಪನಗರ ರೈಲುಗಳು ಸಂಚಾರ ಮಾಡಬಹುದು ಎಂಬ ಆಶಾಭಾವನೆ ಇದೀಗ ಮೂಡಿರುವುದು ಸುಳ್ಳಲ್ಲ.

Recent Articles

spot_img

Related Stories

Share via
Copy link