ಚೆನ್ನೈ:
ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ನಡೆದಿದ್ದು, ಎಐಎಡಿಎಂಕೆ ಪಕ್ಷವು ಮಾಜಿ ಸಚಿವ ಮತ್ತು ಹಿರಿಯ ನಾಯಕ ಕೆಎ ಸೆಂಗೋಟ್ಟಯನ್ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಪಕ್ಷದಿಂದ ಉಚ್ಚಾಟಿಸಲ್ಪಟ್ಟ ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಸೆಂಗೋಟ್ಟಯನ್ ಕರೆ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಸೆಂಗೊಟ್ಟೈಯನ್ ಅವರು ಎಐಎಡಿಎಂಕೆ ಸಂಘಟನಾ ಕಾರ್ಯದರ್ಶಿ ಮತ್ತು ಈರೋಡ್ ನಗರ ಜಿಲ್ಲಾ ಕಾರ್ಯದರ್ಶಿಯಾಗಿ ಪ್ರಮುಖ ಪಾತ್ರ ವಹಿಸಿದ್ದರು.
ಶುಕ್ರವಾರ ಮಾತನಾಡಿದ್ದ ಅವರು, ಪಕ್ಷದ ಒಗ್ಗಟ್ಟಿನ ಅಗತ್ಯವನ್ನು ಒತ್ತಿ ಹೇಳಿದ್ದರು. ಹಿಂದೆ ಪಕ್ಷ ತೊರೆದ ಸದಸ್ಯರನ್ನು ಮತ್ತೆ ಒಗ್ಗೂಡಿಸಲು ನಾಯಕತ್ವವನ್ನು ಒತ್ತಾಯಿಸಿದರು. “ನಮ್ಮನ್ನು ತೊರೆದವರನ್ನು (ಬಣಗಳನ್ನು) ನಾವು ಮತ್ತೆ ಮರಳಿ ಪಡೆದರೆ, ನಾವು ಚುನಾವಣೆಯಲ್ಲಿ ಗೆಲ್ಲಬಹುದು. ನಮ್ಮನ್ನು ತೊರೆದವರನ್ನು ನಾವು ಸ್ವೀಕರಿಸಬೇಕು ಮತ್ತು ಸೇರಿಸಿಕೊಳ್ಳಬೇಕು ಎಂದು ಹೇಳಿದ್ದರು. ಯಾರು ಹಿಂತಿರುಗಬೇಕೆಂದು ಪ್ರಧಾನ ಕಾರ್ಯದರ್ಶಿ (ಇಪಿಎಸ್) ನಿರ್ಧರಿಸಬಹುದು, ಆದರೆ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ನಾಯಕರನ್ನು ಮತ್ತೆ ನೇಮಿಸಿಕೊಳ್ಳಬೇಕು. ಇದು ಸಂಭವಿಸದಿದ್ದರೆ, ಸಮಾನ ಮನಸ್ಕ ನಾಯಕರು ಒಂದಾಗಿ ಅದನ್ನು ಮಾಡುತ್ತಾರೆ ಎಂದು ಹೇಳಿದ್ದರು.
ಪಕ್ಷವು ಬೇಗನೆ ಒಗ್ಗಟ್ಟಾಗಬೇಕು. ಅಲ್ಲಿಯವರೆಗೆ, ನಮ್ಮ ಪ್ರಧಾನ ಕಾರ್ಯದರ್ಶಿಯ ಪ್ರಚಾರ ಪ್ರವಾಸದಲ್ಲಿ ನಾನು ಭಾಗವಹಿಸುವುದಿಲ್ಲ. ” ಬಿಜೆಪಿ ನಾಯಕರೊಂದಿಗಿನ ಭೇಟಿಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ” ನಾನು ಬಿಜೆಪಿ ನಾಯಕರ ಆಹ್ವಾನದ ಮೇರೆಗೆ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದೆ. ಪ್ರಸ್ತುತ ಎರಡೂ ಪಕ್ಷಗಳ ನಡುವೆ ಉತ್ತಮ ಸಂಬಂಧವಿದೆ ಎಂದು ಉತ್ತರಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ, ಸೆಂಗೊಟ್ಟೈಯನ್, ಮಾಜಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ಪ್ರಮುಖರಾದ ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರು ತಮ್ಮನ್ನು ಟೀಕಿಸಿದವರನ್ನು ಸಹ ಪಕ್ಷಕ್ಕೆ ಹೇಗೆ ಮರಳಿ ಸೇರಿಸಿಕೊಂಡರು ಎಂಬುದನ್ನು ನೆನಪಿಸಿಕೊಂಡಿದ್ದರು. ಆದರೆ ಇದೀಗ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ.
