ಮಡಿಕೇರಿ:
ಆನೆಗಳನ್ನು ಓಡಿಸುವ ಕಾರ್ಯಾಚರಣೆಯ ಸಮಯದಲ್ಲಿ ಕಾಡಾನೆ ಹಿಂಡು ದಾಳಿ ಮಾಡಿದ್ದು, ಎಸ್ಟೇಟ್ ಮಾಲೀಕ ಮತ್ತು ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಒಬ್ಬರಿಗೆ ತೀವ್ರ ಗಾಯಗಳಾಗಿದ್ದು, ಇನ್ನಿಬ್ಬರು ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಎಂ ಪ್ರವೀಣ್ ಬೋಪಯ್ಯ ಮಾಲೀಕತ್ವದ ಖಾಸಗಿ ಎಸ್ಟೇಟ್‌ನಲ್ಲಿ 15ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದವು. ಎಚ್ಚೆತ್ತ ಅರಣ್ಯ ಇಲಾಖೆ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಕೈಗೊಂಡಿತ್ತು.
ಈ ಕಾರ್ಯಾಚರಣೆ ವೇಳೆ ಆಕ್ರೋಶಗೊಂಡ ಕಾಡಾನೆಗಳ ಹಿಂಡಿನ ಆನೆಯೊಂದು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ಈ ವೇಳೆ ಅರಣ್ಯಾಧಿಕಾರಿಗಳಾದ ಮುರುಗನ್ ಮತ್ತು ವಿನೋದ್ ಮೇಲೆ ಆನೆ ದಾಳಿ ನಡೆಸಿದ್ದು, ಮುರುಗನ್ ಅವರ ಕಾಲುಗಳಿಗೆ ತೀವ್ರ ಪೆಟ್ಟಾಗಿದೆ. ಆನೆ ದಾಳಿ ತಡೆಯಲು ಯತ್ನಿಸಿದ ಎಸ್ಟೇಟ್ ಮಾಲೀಕ ಪ್ರವೀಣ್ ಅವರಿಗೂ ಗಾಯಗಳಾಗಿವೆ. ಸದ್ಯ ಮೂವರು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾನವರೊಂದಿಗೆ ಸಂಘರ್ಷಕ್ಕಿಳಿದಿರುವ ಕಾಡಾನೆಗಳನ್ನು ಅರಣ್ಯ ಇಲಾಖೆ ಹಿಡಿದು ಸ್ಥಳಾಂತರಿಸಬೇಕು ಎಂದು ಪ್ರವೀಣ್ ಒತ್ತಾಯಿಸಿದ್ದಾರೆ.