ಕಾರವಾರ:
ಗೋವಾ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಕಾರವಾರದ ಎನ್‌ಎಚ್ 66 ರಲ್ಲಿ ಸೇತುವೆ ಕುಸಿಯಲು ಎನ್‌ಎಚ್‌ಎಐನ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ ಎಂದು ಐಎಎಸ್ ಅಧಿಕಾರಿ ಹೇಳಿದ್ದಾರೆ.
2013ರಲ್ಲಿ ಸೇತುವೆಯನ್ನು ಎನ್‌ಎಚ್‌ಎಐ ಅಧೀನಕ್ಕೆ ವರ್ಗಾಯಿಸಲಾಗಿದ್ದು, ಹಳೆಯ ಸೇತುವೆಯನ್ನು ನಿರ್ವಹಿಸಲು ಪ್ರಾಧಿಕಾರವು ಒಪ್ಪಂದ ಮಾಡಿಕೊಂಡಿತ್ತು. ನಿರ್ವಹಣೆಯ ನಂತರ ಅವರು ಫಿಟ್ನೆಸ್ ಪ್ರಮಾಣಪತ್ರವನ್ನು ನೀಡಬೇಕಿತ್ತು. ಆದರೆ, ಯಾವುದೇ ನಿರ್ವಹಣಾ ಕಾರ್ಯಗಳನ್ನು ನಡೆಸದೆ ಪ್ರಮಾಣಪತ್ರವನ್ನು ನೀಡಿದ್ದಾರೆಂದು ತಿಳಿಸಿದ್ದಾರೆ,
ಈ ಆರೋಪಕ್ಕೆ ಪೂರಕವೆಂಬಂತೆ ತಮಿಳುನಾಡು ಮೂಲದ ಟ್ರಕ್ ಚಾಲಕರಿಂದ ಎನ್‌ಎಚ್‌ಎಐ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ ಎಂದು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಅವರು ಹೇಳಿದ್ದಾರೆ. ಟ್ರಕ್ ಚಾಲಕ ಬಾಲಮುರುಗನ್ ಪೂಸ್ವಾಮಿ ಎಂಬುವವರು ದೂರು ನೀಡಿದ್ದು, ದೂರಿನಲ್ಲಿ ನಾನು ಗೋವಾದಿಂದ ಕಾರವಾರ ಕಡೆಗೆ ಬರುತ್ತಿದ್ದಾಗ ಸೇತುವೆ ಕುಸಿದಿತ್ತು. ಎನ್‌ಎಚ್‌ಎಐನ ಕಳಪೆ ನಿರ್ವಹಣೆ ಮತ್ತು ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಈ ನಡುವೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದು, ಎನ್‌ಎಚ್‌ಎಐ ವಿರುದ್ಧ ತನಿಖೆ ಮತ್ತು ಕ್ರಮಕ್ಕೆ ಶಿಫಾರಸು ಮಾಡಲು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಸೇತುವೆಯ ನಿರ್ಮಾಣದ ಪ್ರಸ್ತಾಪವು 1960 ರ ದಶಕದ ಆರಂಭವಾಗಿತ್ತು. ಬಳಿಕ ನಿರ್ಮಾಣ ಕಾರ್ಯವು 1965 ರಲ್ಲಿ ಪ್ರಾರಂಭವಾಯಿತು. ಬಳಿಕ 1983ರಲ್ಲಿ ಸೇತುವೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿತ್ತು. ಅಂದಿನ ರಾಜ್ಯ ಸರಕಾರ 4 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿತ್ತು. 665.5 ಮೀಟರ್ ಉದ್ದದ ಸೇತುವೆಯನ್ನು 2009 ರಲ್ಲಿ ದುರಸ್ತಿ ಮಾಡಿ 2013 ರಲ್ಲಿ NHAI ಗೆ ಹಸ್ತಾಂತರಿಸಲಾಯಿತು. ಬಳಿಕ NHAI ಹೊಸ ಸೇತುವೆಯನ್ನು ನಿರ್ಮಿಸಿ, ಹಳೆಯ ಸೇತುವೆಯ ನಿರ್ವಹಣೆಯನ್ನು ಕೈಬಿಟ್ಟಿತ್ತು ಎಂದು ಮೂಲಗಳು ತಿಳಿಸಿವೆ