ಕಲ್ಲೂರು ಕೆರೆಗೆ ನೀರು ಹರಿಸುವ ಯೋಜನೆಗೆ ಶಾಸಕರ ಚಾಲನೆ

 ಗುಬ್ಬಿ :

      ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 21 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಸಿ.ಎಸ್.ಪುರ ಹೋಬಳಿಯಲ್ಲಿ ನೂರಾರು ಕೋಟಿ ಅನುದಾನದಲ್ಲಿ ಅಭಿವೃಧ್ದಿ ಕೆಲಸ ನಡೆದಿದ್ದು ಇದೀಗ 40ಕ್ಕೂ ಗ್ರಾಮಗಳ ಅಂತರ್ಜಲ ವೃದ್ದಿಗೆ ಸಹಕಾರಿಯಾದ ಕಲ್ಲೂರು ಕೆರೆಯನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೇರಿಸಲು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.

      ತಾಲೂಕಿನ ಕಡಬ ಹೋಬಳಿ ಕಲ್ಲೂರು ಗ್ರಾಮದಲ್ಲಿ ಕೆರೆಗೆ ನೀರು ಹರಿಸುವ 10 ಕೋಟಿ ರೂ.ಗಳ ಬೃಹತ್ ಯೋಜನೆಗೆ ಕೆರೆ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈ ಬೃಹತ್ ಕಾಮಗಾರಿ ಬಹು ವರ್ಷಗಳ ಕಸನಾಗಿತ್ತು. ವಾಸುದೇವ ಅಣೆಯ ಮೂಲಕ ವರ್ಷದ 8 ತಿಂಗಳು ಕಾಲ ನಿರಂತರವಾಗಿ ಕೆರೆಗೆ ನೀರು ಹರಿಸುವ ಕೆಲಸ ನಡೆಸಿ ಕಾಂಕ್ರಿಟ್ ಕಾಲುವೆಯ ಶಾಶ್ವತ ಕಾಮಗಾರಿ ಈ ಭಾಗದ ಕೊಡುಗೆಯಾಗಲಿದೆ ಎಂದು ಸಂತಸ ಹಂಚಿಕೊಂಡರು.

      ಈ ಬಾರಿ ಕಲ್ಲೂರು ಕೆರೆ ತುಂಬಿಸಿ ಮುಂದಿನ ವರ್ಷದಲ್ಲಿ ಕೃಷಿ ಚಟುವಟಿಕೆಗೆ ನೀರು ನೀಡುವ ಭರವಸೆ ನೀಡಿದ ಅವರು ಕೊರೋನಾ ಪರಿಣಾಮ ಬೀರದಿದ್ದರೆ ಈಗಾಗಲೇ ಈ ಭಾಗದಲ್ಲಿ ನೂರು ಕೋಟಿ ಕೆಲಸ ನಡೆಯುತಿತ್ತು. ಬಿಳಿನಂದಿ ಗ್ರಾಮಕ್ಕೆ 70 ಲಕ್ಷ ರೂ, ಜನ್ನೇನಹಳ್ಳಿಗೆ 50 ಕೋಟಿ, ಕನ್ನೇನಹಳ್ಳಿ 30 ಲಕ್ಷ ರೂ ಕೆಲಸಗಳು ಶೀಘ್ರದಲ್ಲಿ ನಡೆಯಲಿದೆ. ಈ ಜತೆಗೆ ಕಲ್ಲೂರು ಗ್ರಾಮದಿಂದ ಕ್ರಾಸ್‍ವರೆಗೆ ರಸ್ತೆ ಅಭಿವೃದ್ದಿಗೆ 70 ಲಕ್ಷ ರೂ ಮಂಜೂರು ಮಾಡಿಸಲಾಗಿದೆ. ಮೈಸೂರು ರಸ್ತೆ ಕೆಲಸ 22 ಕೋಟಿ ರೂಗಳಲ್ಲಿ ನಡೆದಿದೆ ಎಂದು ವಿವರಿಸಿದರು.

       ಆರ್‍ಆರ್ ನಗರ, ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಿದೆ. ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯತ್ವ ಕೂಡಾ ಬಿಜೆಪಿ ಪಾಲಾಗಿ ಜಿಲ್ಲೆಯಲ್ಲಿ ಶಾಸಕತ್ವದ ಬಲ ಹೆಚ್ಚಿಸಿಕೊಂಡಿದೆ. ಮುಂದಿನ ದಿನದಲ್ಲಿ 150 ಸೀಟುಗಳನ್ನು ತನ್ನದಾಗಿಸಿಕೊಂಡು ರಾಜ್ಯದಲ್ಲಿ ಮತ್ತೊಮ್ಮೆ ಆಡಳಿತ ಮಾಡುವ ಮನ್ಸೂಚನೆ ಈ ಫಲಿತಾಂಶವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಲ್ಲೂರು ನೇಕಾರರ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವ ಜತೆ ನೇಕಾರರ ವೃತ್ತಿಗೆ ಉಚಿತ ವಿದ್ಯುತ್ ಒದಗಿಸುವ ಕೆಲಸ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಶೀಘ್ರದಲ್ಲಿ ಈ ಕಾರ್ಯವಾಗಲಿದೆ. ಹಾಗೂ ವಾಸುದೇವ ಅಣೆಯನ್ನು ಪ್ರವಾಸಿ ಕೇಂದ್ರವಾಗಿ ಮಾರ್ಪಾಟು ಮತ್ತು ಕಲ್ಲೂರು ಸಂತೆ ಮೈದಾನ ಅಭಿವೃದ್ದಿಗೆ ಒಂದು ಕೋಟಿ ರೂಗಳ ನೀಡುವ ಭರವಸೆ ನೀಡಿದರು.

      ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಎಸ್.ಗಾಯತ್ರಿದೇವಿ ಮಾತನಾಡಿ, ಸಿ.ಎಸ್.ಪುರ ಹೋಬಳಿಯ ಎಲ್ಲಾ ಕೆರೆಗಳನ್ನು ತುಂಬಿಸುವ ಪ್ರಾಮಾಣಿಕ ಕೆಲಸ ಮಾಡಿರುವ ಜಯರಾಂ ಅವರು ನೀರುಗಂಟಿಯಾಗಿ ಹಗಲಿರುಳು ಕೆಲಸ ಮಾಡಿದ್ದಾರೆ. ಹಿಂಡಿಸ್ಕೆರೆ ಮತ್ತು ಸಿ.ಎಸ್.ಪುರ ಕೆರೆ ಶೀಘ್ರದಲ್ಲಿ ಭರ್ತಿಗೊಳಿಸಿ ಶೇಕಡಾನೂರರಷ್ಟು ಕೆಲಸ ರುಜುವಾತು ಮಾಡಲಿದ್ದಾರೆ. ಬಿಜೆಪಿ ಸರ್ಕಾರದಿಂದ ಮತ್ತಷ್ಟು ಅನುದಾನ ತರುವ ಮೂಲಕ ವಿಶೇಷ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದರು.

       ಕಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್ ಮಾತನಾಡಿ, ಕಲ್ಲೂರು ಭಾಗಕ್ಕೆ ನೀಡಿರುವ ಅನುದಾನ ಅತಿ ಹೆಚ್ಚು ಎನಿಸಿದೆ. 21 ಕೋಟಿ ರೂಗಳ ಕೆಲಸ ಸಾರ್ಥಕ ಕೆಲಸವಾಗಿದೆ. ರೈತರು ಪ್ರತಿ ವರ್ಷ 5 ಲಕ್ಷಕ್ಕೂ ಅಧಿಕ ಹಣ ಬೋರ್ ಕೊರೆಸಲು ಬಳಸುತ್ತಿದ್ದರು. ಆದರೆ ಕಲ್ಲೂರು ಕೆರೆ ತುಂಬಿದರೆ ಈ ಭಾಗದ ಸಾವಿರಾರು ರೈತರಿಗೆ ಜೀವ ಬಂದಂತಾಗುತ್ತದೆ ಎಂದರು.

      ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಸಿದ್ದರಾಮಯ್ಯ, ಭಾನುಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಪರಪ್ಪ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ವೀರೇಂದ್ರ ಪಾಟೀಲ್, ರಾಜೇಗೌಡ, ಚನ್ನಿಗಪ್ಪ, ಮಧುಸೂದನ್, ಗುತ್ತಿಗೆದಾರ ಗೌರೀಶ್, ಸುರೇಶ್, ಕಾಂತರಾಜು ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap