ಕಾಲ್ತುಳಿತ ಪ್ರಕರಣ; ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಆದೇಶ ಅನುಮೋದಿಸಿದ ಕೇಂದ್ರ

ಬೆಂಗಳೂರು:

     ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ  ಸಂಬಂಧ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದಡಿ ರಾಜ್ಯ ಸರ್ಕಾರವು ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಿತ್ತು.

    ಇದೀಗ ರಾಜ್ಯ ಸರ್ಕಾರದ ವರದಿಯನ್ನು ಅಂಗೀಕರಿಸಿದ ಕೇಂದ್ರ ಡಿಪಿಎಆರ್‌ಗೆ ಮಾಹಿತಿ ರವಾನೆ ಮಾಡಿದೆ. ದಯಾನಂದ್, ವಿಕಾಸ್ ಕುಮಾರ್ ಮತ್ತು ಶೇಖರ್ ಎಂಬ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು.

    ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ, ಎಡಿಜಿಪಿ ಬಿ.ದಯಾನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಸಂಬಂಧ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಇತ್ತೀಚೆಗೆ ಸಮಗ್ರ ವರದಿ ಸಲ್ಲಿಸಿತ್ತು.

   ಕೇಂದ್ರಕ್ಕೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮೂಲಕ ವರದಿ ಸಲ್ಲಿಸಲಾಗಿತ್ತು. ಇದರಲ್ಲಿ ಕಾಲ್ತುಳಿತ ದುರಂತಕ್ಕೆ ಪೊಲೀಸ್ ಭದ್ರತಾ ವೈಫಲ್ಯ ಹಾಗೂ ಸಂವಹನ ಕೊರತೆ ಪ್ರಮುಖ ಕಾರಣಗಳು. ಈ ಅಂಶಗಳನ್ನಾಧರಿಸಿಯೇ ಐಪಿಎಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರದ ವರದಿಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

   ಅಖಿಲ ಭಾರತ ಆಡಳಿತ ಸೇವಾಮಟ್ಟದ ಅಧಿಕಾರಿಗಳು ಅಂದರೆ ಐಎಎಸ್‌ ಹಾಗೂ ಐಪಿಎಸ್ ಅಧಿಕಾರಿಗಳ ಅಮಾನತು ಬಗ್ಗೆ ನಿಯಮಾನುಸಾರ ಕೇಂದ್ರ ಸರ್ಕಾರ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಿದೆ. ಅಧಿಕಾರಿಗಳ ಕೇಡರ್ ಹಾಗೂ ನೇಮಕಾತಿ ಬಗ್ಗೆ ರಾಜ್ಯ ಸರ್ಕಾರ ಅಧಿಕಾರ ಹೊಂದಿದೆ. ಆದರೆ ಅಮಾನತು ವಿಚಾರದಲ್ಲಿ ಕೇಂದ್ರದ ತೀರ್ಮಾನವೇ ಅಂತಿಮವಾಗಿರಲಿದೆ. ಹೀಗಾಗಿ ಈಗಿನ ಐಪಿಎಸ್ ಅಧಿಕಾರಿಗಳ ತಲೆದಂಡ ಕುರಿತು ಕೇಂದ್ರಕ್ಕೆ ರಾಜ್ಯ ವರದಿ ಸಲ್ಲಿಸಿತ್ತು. ಇದೀಗ ಅಧಿಕಾರಿಗಳ ಅಮಾನತನ್ನು ಕೇಂದ್ರ ಅನುಮೋದಿಸಿದೆ.

Recent Articles

spot_img

Related Stories

Share via
Copy link