ನವದೆಹಲಿ:
ಭಾನುವಾರ ನವದೆಹಲಿಯ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಏರ್ಪಟ್ಟಿತ್ತು. ಹಲವು ರೈಲುಗಳ ವಿಳಂಬದಿಂದಾಗಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 12 ಮತ್ತು 13 ರಲ್ಲಿ ಘಟನೆ ನಡೆದಿದೆ. ಒಂದೇ ಬಾರಿಗೆ ಹೆಚ್ಚಿನ ಜನ ಜಮಾಯಿಸಿದ್ದರಿಂದ ಅಸ್ತವ್ಯಸ್ತ ಪರಿಸ್ಥಿತಿಗೆ ಕಾರಣವಾಗಿದೆ. ಶಿವಗಂಗಾ ಎಕ್ಸ್‌ಪ್ರೆಸ್, ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್, ಜಮ್ಮು ರಾಜಧಾನಿ ಎಕ್ಸ್‌ಪ್ರೆಸ್, ಲಕ್ನೋ ಮೇಲ್ ಮತ್ತು ಮಗಧ ಎಕ್ಸ್‌ಪ್ರೆಸ್‌ಗಳ ನಿರ್ಗಮನ ವಿಳಂಬವಾಗಿದ್ದರಿಂದ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ದಟ್ಟಣೆ ಉಂಟಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ನಿಲ್ದಾಣವು ಕಿಕ್ಕಿರಿದು ತುಂಬಿ, ಕಾಲ್ತುಳಿತದಂತಹ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ತಕ್ಷಣ ಕಾರ್ಯ ಪ್ರವರ್ತರಾದರು. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.
ಭದ್ರತಾ ಸಿಬ್ಬಂದಿಗಳು ಯಾವುದೇ ಅಪಘಾತವನ್ನು ತಡೆಗಟ್ಟಲು ತುರ್ತು ಜನಸಂದಣಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದರು. ದೆಹಲಿ ಪೊಲೀಸರ ಪ್ರಕಾರ, ವಿಪರೀತ ಜನದಟ್ಟಣೆಯ ಹೊರತಾಗಿಯೂ, ಯಾವುದೇ ಗಾಯಗಳು ಸಂಭವಿಸಿಲ್ಲ. “ನವದೆಹಲಿ ರೈಲು ನಿಲ್ದಾಣದಲ್ಲಿ ಭಾರಿ ಜನದಟ್ಟಣೆ ಇತ್ತು, ಯಾವುದೇ ಕಾಲ್ತುಳಿತ ಅಥವಾ ಕಾಲ್ತುಳಿತದಂತಹ ಪರಿಸ್ಥಿತಿ ಇರಲಿಲ್ಲ. ಕಾಯ್ದಿರಿಸದ ಪ್ರಯಾಣಿಕರನ್ನು ಹೋಲ್ಡಿಂಗ್ ಪ್ರದೇಶದ ಮೂಲಕ ಕರೆದೊಯ್ಯುವ ಪ್ರೋಟೋಕಾಲ್ ಅನ್ನು ಬಳಸಲಾಗುತ್ತಿದೆ” ಎಂದು ರೈಲ್ವೆ ಸಚಿವಾಲಯ ಹೇಳಿಕೆ ನೀಡಿದೆ. ರೈಲು ವಿಳಂಬಕ್ಕೆ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಈ ಹಿಂದೆ ಮಹಾಕುಂಭದ ಸಮಯದಲ್ಲಿ ಫೆ. 15 ರಂದು ಇದೇ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿತ್ತು. ನಿಲ್ದಾಣದಲ್ಲಿ ಭಾರಿ ಜನಸಂದಣಿ ಜಮಾಯಿಸಿದ್ದರಿಂದ 18 ಪ್ರಯಾಣಿಕರು ಸಾವನ್ನಪ್ಪಿದರು ಮತ್ತು ಸುಮಾರು 15 ಪ್ರಯಾಣಿಕರು ಗಾಯಗೊಂಡಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಗಧ ಎಕ್ಸ್‌ಪ್ರೆಸ್ ನಿಗದಿತ ನಿರ್ಗಮನಕ್ಕೆ ಮುಂಚಿತವಾಗಿ ಪ್ಲಾಟ್‌ಫಾರ್ಮ್ ಸಂಖ್ಯೆ 15 ಕ್ಕೆ ಬಂದಿದೆ. ರೈಲು ಹತ್ತಲು ಅಲ್ಲಿ ಭಾರಿ ಜನಸಮೂಹ ಸೇರಿತ್ತು. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಹಲವಾರು ಜನರು ಹಳಿಗಳನ್ನು ದಾಟಿ ಬೇರೆ ಬೇರೆ ಬೋಗಿಗಳಿಗೆ ನುಗ್ಗಿದರು, ಮತ್ತು ಪ್ಲಾಟ್‌ಫಾರ್ಮ್‌ನಲ್ಲಿದ್ದ ಇತರರು ಸಹ ರೈಲಿನೊಳಗೆ ಹತ್ತಲು ಧಾವಿಸಿದರು, ಇದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಹೇಳಿದ್ದರು.








