ವಿಜಯನಗರ
ಕಲುಷಿತ ನೀರು ಕುಡಿದು ವಾಂತಿ-ಭೇದಿಯಿಂದ ಬಳಲಿ ನವಜಾತ ಶಿಶು ಸೇರಿದಂತೆ ಐವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಹರಪನಹಳ್ಳಿ ತಾಲೂಕಿನ ಟಿ ತುಂಬಿಗೇರೆ ಗ್ರಾಮದಲ್ಲಿ ಘಟನೆ ನಡೆದಿದೆ. ಸುರೇಶ್ (30), ಮಹಾಂತೇಶ್ (45), ಗೌರಮ್ಮ (60), ಹನುಮಂತಪ್ಪ (38) ಮತ್ತು ಎಂಟು ತಿಂಗಳ ಗಂಡು ಮಗು ಮೃತಪಟ್ಟಿದೆ. ಇವರ ಸಾವಿಗೆ ಕಲುಷಿತ ನೀರು ಸೇವನೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ.
ಗ್ರಾಮಕ್ಕೆ ಕಳೆದ 15 ದಿನಗಳಿಂದ ಕಲುಷಿತ ನೀರು ಸರಬರಾಜು ಆಗುತ್ತಿದೆ. ಇದನ್ನು ತಿಳಿಯದೆ ಗ್ರಾಮಸ್ಥರು ನೀರು ಕುಡಿಯುತ್ತಿದ್ದಾರೆ. ಇದರಿಂದ ಗ್ರಾಮದ 50ಕ್ಕೂ ಹೆಚ್ಚು ಜನರು ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗರ್ಭಿಣಿ ನಿಂಗಮ್ಮ ಎಂಬುವರು ವಾಂತಿ-ಭೇದಿಯಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿಂಗಮ್ಮ ಅವರಿಗೆ ವಾಂತಿ-ಭೇದಿ ತೀವ್ರವಾದ ಹಿನ್ನೆಲೆಯಲ್ಲಿ ಗರ್ಭದಲ್ಲಿನ ಮಗು ಮೃತಪಟ್ಟಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಕಳೆದ ವಾರ ಮೂವರು ಮೃತಪಟ್ಟಿದ್ದಾರೆ. ಇದೀಗ ಇಬ್ಬರು ಮೃತಪಟ್ಟಿದ್ದಾರೆ.
ನವಜಾತ ಶಿಶು ಸೇರಿದಂತೆ ಐವರ ಸಾವರಿಗೆ ಕಲುಷಿತ ನೀರು ಸೇವನೆ ಕಾರಣ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. “ಕಲುಷಿತ ನೀರು ಸೇವಿಸಿ ಐವರು ವಾಂತಿ-ಭೇದಿಯಿಂದ ಬಳಲುತ್ತಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿದೇವು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ, ತಾಲೂಕು ಆರೋಗ್ಯ ಅಧಿಕಾರಿಗಳು ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿರುವುದನ್ನು ದೃಢಪಡಿಸಿಲ್ಲ.
ಸದ್ಯ ನೀರನ್ನು ತಪಾಸಣೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಐವರ ಸಾವಿಗೆ ಕಾರಣವೇನು ಎಂಬುವುದು ತಿಳಿಯಲಿದೆ. ಇಷ್ಟು ಅನಾಹುತ ಸಂಭವಿಸಿದರೂ ಆರೋಗ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಇನ್ನೂವರೆಗೂ ಭೇಟಿ ನೀಡದೆ ಇದ್ದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಣಿ ಸಾವಿನಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ.