ಕಲ್ಯಾಣ ಕರ್ನಾಟಕದ 1493 ಕೋಟಿ ರೂ. ಕ್ರಿಯಾಯೋಜನೆಗೆ ಅನುಮೋದನೆ

ಬೆಂಗಳೂರು : 

      ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಸಕ್ತ ಸಾಲಿನ ಕ್ರಿಯಾಯೋಜನೆ ರೂಪಿಸಲು ಅನುಮೋದನೆ ಕೋರಿ ರಾಜ್ಯಪಾಲರಿಗೆ ಸಲ್ಲಿಸಿದ್ದ ರೂ. 1492.97 ಕೋಟಿ ಅನುದಾನಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಗಿರಿಜನ ಉಪಯೋಜನೆಗೆ ರೂ. 100 ಕೋಟಿ, ವಿಶೇಷ ಘಟಕ (ಎಸ್‍ಸಿಪಿ) ರೂ. 300 ಕೋಟಿ ಹಾಗೂ ಸಾಮಾನ್ಯ ರೂ. 1092.97 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಅದರಂತೆ ಕ್ರಿಯಾಯೋಜನೆ ರೂಪಿಸಲು ರಾಜ್ಯಪಾಲರಿಂದ ಗ್ರೀನ್‍ಸಿಗ್ನಲ್ ದೊರೆತಿದೆ.

      2021-22 ನೇ ಸಾಲಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಒದಗಿಸಲಾಗಿರುವ ರೂ. 1492.97 ಕೋಟಿ ಅನುದಾನಕ್ಕೆ ಮಂಡಳಿ ವ್ಯಾಪ್ತಿಯ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ನಂಜುಂಡಪ್ಪ ವರದಿ ಆದರಿಸಿ ಅನುದಾನ ಹಂಚಿಕೆ ಮಾಡಲಾಗಿದೆ. ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗಳಡಿ ಮಂಡಳಿಯ ಒಟ್ಟು ಅನುದಾನದ ಶೇ. 84 ರಷ್ಟು ಅನುದಾನದಲ್ಲಿ ಮೈಕ್ರೋ ಯೋಜನೆಗೆ ಶೇ. 70 ರಷ್ಟು ಅನುದಾನವನ್ನು ತಾಲ್ಲೂಕುವಾರು ಹಂಚಿಕೆ ಮಾಡಲಾಗುವುದು. ಮ್ಯಾಕ್ರೋ ಯೋಜನೆಗೆ ಶೇ. 30 ರಷ್ಟು ಅನುದಾನವನ್ನು ಬೃಹತ್ ಮೊತ್ತದ 3 ರಿಂದ 4 ಯೋಜನೆಗಳಿಗೆ ಮಾತ್ರ ಹಂಚಿಕೆ ಮಾಡಲಾಗುವುದು. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಲಯಗಳು, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ನೀರಾವರಿ, ಕುಡಿಯುವ ನೀರು, ರಸ್ತೆ ಮತ್ತು ಸಂಪರ್ಕ, ಅಂತರ್ಜಲ ಸಂರಕ್ಷಣೆ, ಕೃಷಿ ವಲಯಕ್ಕೆ ಹೆಚ್ಚಿನ ಆಧ್ಯತೆ ನೀಡಿ ಕಾಮಗಾರಿ ನಡೆಸಲಾಗುವುದು. ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗಳಡಿ ಜಿಲ್ಲಾವಾರು ಸಾಮಾನ್ಯ, ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನಕ್ಕೆ ಕ್ರಿಯಾ ಯೋಜನೆ ಸಲ್ಲಿಸಿ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕು. ವಿಶೇಷ ಘಟಕ ಯೋಜನೆ (ಎಸ್‍ಸಿಪಿ) ಮತ್ತು ಗಿರಿಜನ ಉಪಯೋಜನೆ (ಟಿಎಸ್‍ಪಿ) ಯಡಿ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆಗೆ ಕ್ರಿಯಾಯೋಜನೆಯನ್ನು ಪ್ರತ್ಯೇಕವಾಗಿ ರೂಪಿಸಿ ಅನುಷ್ಟಾನಗೊಳಿಸಬೇಕಿದೆ.

ವಲಯವಾರು ಅನುದಾನ ಹಂಚಿಕೆ

      ಶಿಕ್ಷಣ, ಆರೋಗ್ಯ, ಕ್ರೀಡಾ, ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ, ಅಂತರ್ಜಲ ಸಂರಕ್ಷಣೆ, ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಮೂಲ ಸೌಕರ್ಯ, ರಸ್ತೆ ಮತ್ತು ಸಂಪರ್ಕ, ನೀರು ಸರಬರಾಜು, ಪ್ರವಾಸೋಧ್ಯಮ ವಲಯಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಬಳಕೆಯಲ್ಲಿ ಹೆಚ್ಚಿನ ಆಧ್ಯತೆ ನೀಡಲಾಗುವುದು. ಕಳೆದ ಸಾಲಿನಲ್ಲಿ ನಿಗದಿಯಾಗಿದ್ದ ರೂ. 1131 ಕೋಟಿ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಪ್ರಾರಂಭವಾದಾಗಿನಿಂದ ಇದೇ ಮೊದಲಬಾರಿಗೆ ಪೂರ್ಣ ಅನುದಾನವನ್ನು ವೆಚ್ಚ ಭರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಸಚಿವ ಡಾ. ನಾರಾಯಣಗೌಡ ಕಳೆದ ಜನೆವರಿಯಿಂದ ಸತತವಾಗಿ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದ್ದರ ಪ್ರತಿಫಲವಾಗಿತ್ತು.

ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ

      ಇದೇ ಮೊದಲಬಾರಿಗೆ ಕೋವಿಡ್-19ರ ದುಷ್ಪರಿಣಾಮದಿಂದ ರಾಜ್ಯ ಆರ್ಥಿಕ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ಅನುದಾನವನ್ನು ಕಡಿತಗೊಳಿಸದೆ, ಪೂರ್ಣ ಅನುದಾನವನ್ನು ನೀಡಿರುವುದು, ಅವರ ಕಲ್ಯಾಣ ಕರ್ನಾಟಕದ ಮೇಲಿನ ಪ್ರೀತಿಗೆ ಸಾಕ್ಷಿ.

        ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈ ಅನುದಾನ ವಿನಿಯೋಗಿಸಲಾಗುವುದು. ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ. ಕಳಪೆ ಕಾಮಗಾರಿ ನಡೆದು ದೂರು ಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಕಣ್ಣಿಗೆ ಕಾಣುವಂತಹ ಬಹು ಜನೋಪಯೋಗಿ ಕಾರ್ಯಕ್ರಮಗಳಿಗೆ ಆಧ್ಯತೆ ನೀಡಲಾಗುವುದು. ಡಾ. ನಂಜುಂಡಪ್ಪ ವರದಿ ಅನ್ವಯ ಕಲ್ಯಾಣ ಕರ್ನಾಟಕದ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ 32 ತಾಲ್ಲೂಕುಗಳು ಹಿಂದುಳಿದಿವೆ. ಆ ತಾಲ್ಲೂಕುಗಳ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರಸಕ್ತ ಸಾಲಿನಲ್ಲೂ ಸುಮಾರು ಒಂದುವರೆ ಸಾವಿರ ಕೋಟಿ ಅನುದಾನ ನೀಡಿದ್ದು, ಸಮರ್ಪಕವಾಗಿ ವಿನಿಯೋಗವಾಗಬೇಕು. ನಿಗದಿತ ಅವಧಿಯೊಳಗೆ ಪೂರ್ಣ ಅನುದಾನವನ್ನು ವೆಚ್ಚಭರಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸಚಿವ ಡಾ. ನಾರಾಯಣ ಗೌಡ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link