ರಾಜ್ಯಸಭೆಗೆ ಕಮಲ್ ಹಾಸನ್….: ಯಾವ ಪಕ್ಷ ಬೆಂಬಲಿಸುತ್ತಿದೆ ಗೊತ್ತಾ….?

ತಮಿಳುನಾಡು :

     ನಟ ಕಮಲ್ ಹಾಸನ್ ಅವರು ಸದ್ಯ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಕನ್ನಡದ ಬಗ್ಗೆ ಅವರು ನೀಡಿದ ದೋಷಪೂರಿತ ಹೇಳಿಕೆ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಿರುವಾಗಲೇ ಕಮಲ್ ಹಾಸನ್ ಅವರು ರಾಜ್ಯಸಭೆ ಪ್ರವೇಶಿಸಲು ರೆಡಿ ಆಗಿದ್ದಾರೆ. ಜೂನ್​ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ತಮಿಳುನಾಡಿನ ಡಿಎಂಕೆ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪಕ್ಷದ ಮೈತ್ರಿ ಕೂಟದ ಕಮಲ್ ಹಾಸನ್ ಹೆಸರು ಕೂಡ ಇದೆ.

    ಡಿಎಂಕೆ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಸಲ್ಮಾ, ಪಿ. ವಿಲ್ಸನ್, ಎಸ್.ಆರ್. ಶಿವಲಿಂಗಂ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳಾಗಿ ಆಯ್ಕೆ ಆಗಿದ್ದಾರೆ. ಇದರ ಜೊತೆ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯಂ ಪಕ್ಷಕ್ಕೆ ಒಂದು ಸ್ಥಾನ ನೀಡಲಾಗಿದೆ. ಈ ಪಕ್ಷದಿಂದ ಕಮಲ್ ಹಾಸನ್ ಅವರನ್ನು ಆಯ್ಕೆ ಮಾಡಿರೋದಾಗಿ ಡಿಎಂಕೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಜುಲೈ 24 ರಂದು, ತಮಿಳುನಾಡಿನ ಆರು ರಾಜ್ಯಸಭಾ ಸದಸ್ಯರು ನಿವೃತ್ತರಾಗಲಿದ್ದಾರೆ. ಅವರಲ್ಲಿ ಪಿಎಂಕೆಯ ಅನ್ಬುಮಣಿ ರಾಮದಾಸ್ ಮತ್ತು ಎಂಡಿಎಂಕೆಯ ಪ್ರಮುಖ ನಾಯಕ ವೈಕೊ ಸೇರಿದ್ದಾರೆ. ರಾಜ್ಯ ಸಭೆಯಲ್ಲಿ ಮಿತ್ರಪಕ್ಷಗಳ ಬಲದ ಆಧಾರದ ಮೇಲೆ, 6 ಸ್ಥಾನಗಳಲ್ಲಿ ಡಿಎಂಕೆ ಸುಲಭವಾಗಿ 4 ಸ್ಥಾನಗಳನ್ನು ಗೆಲ್ಲಬಹುದು. ಪ್ರಮುಖ ವಿರೋಧ ಪಕ್ಷ ಎನಿಸಿಕೊಂಡಿರೋ ಎಐಎಡಿಎಂಕೆ 2 ಸ್ಥಾನಗಳನ್ನು ಗೆಲ್ಲಬಹುದು. ಎಐಎಡಿಎಂಕೆಗೆ ಬಿಜೆಪಿ ಸೇರಿದಂತೆ ಮಿತ್ರಪಕ್ಷಗಳ ಬೆಂಬಲವಿದೆ. 

   ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಅವರ ಹೇಳಿಕೆಗಳು ವ್ಯಾಪಕ ಟೀಕೆಗೆ ಗುರಿಯಾಗಿದೆ. ಚೆನ್ನೈನಲ್ಲಿ ನಡೆದ ‘ಥಗ್ ಲೈಫ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್, ಶಿವರಾಜ್ ಕುಮಾರ್ ಅವರನ್ನು ಉಲ್ಲೇಖಿಸಿ ಮಾತನಾಡಿದರು. ‘ಇದು ನನ್ನ ಕುಟುಂಬ. ಅದಕ್ಕಾಗಿಯೇ ಅವರು (ಶಿವರಾಜ್​ಕುಮಾರ್) ಇಲ್ಲಿಗೆ ಬಂದಿದ್ದಾರೆ. ನಿಮ್ಮ ಭಾಷೆ (ಕನ್ನಡ) ಕೂಡ ತಮಿಳಿನಿಂದ ಹುಟ್ಟಿಕೊಂಡಿದೆ’ ಎಂದು ಕಮಲ್ ಹೇಳಿದರು. ಕಮಲ್ ಅವರ ಹೇಳಿಕೆ ಟೀಕೆಗೆ ಕಾರಣವಾಗುತ್ತಿದೆ. ಕನ್ನಡಿಗರ ಸ್ವಾಭಿಮಾನಕ್ಕೆ ಅವಮಾನ ಮಾಡಿದ್ದಕ್ಕಾಗಿ ಅವರು ತಕ್ಷಣ ಕ್ಷಮೆಯಾಚಿಸಬೇಕೆಂದು ಕನ್ನಡ ಜನತೆ ಒತ್ತಾಯಿಸುತ್ತಿದೆ.

Recent Articles

spot_img

Related Stories

Share via
Copy link