ಬೆಂಗಳೂರಿನಲ್ಲಿ ಮಹಿಳೆ ಮೇಲೆ ಎರಗಿದ ಮೂವರು ಕಾಮುಕರ ಸೆರೆ…..!

ಬೆಂಗಳೂರು:

    ರಾಜಧಾನಿ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿಯಲ್ಲಿ  ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ  ಮತ್ತು ಡಕಾಯಿತಿ  ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ  ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ತಲಾಶ್ ಮುಂದುವರೆದಿದೆ. ಈ ಘೋರ ಘಟನೆಯಿಂದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ಗಾಬರಿಯಾಗಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಸಿ.ಕೆ. ಬಾಬಾ, “ಮೊನ್ನೆ ರಾತ್ರಿ ಮಾದನಾಯಕನಹಳ್ಳಿ ಬಳಿ ಈ ಘಟನೆ ನಡೆದಿದೆ. ಅಲ್ಲಿ ಒಟ್ಟು ಮೂರು ಮನೆಗಳಿದ್ದು, ಎರಡು ಮತ್ತು ಮೂರನೇ ಮನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಕುಟುಂಬಗಳು ವಾಸವಾಗಿದ್ದವು. ಈ ವೇಳೆ ಐವರು ಪುರುಷರು ಅಲ್ಲಿಗೆ ಬಂದು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ” ಎಂದು ಹೇಳಿದ್ದಾರೆ.

    ಗಂಗೊಂಡನಹಳ್ಳಿ ನಿವಾಸಿ ಮಾರೇಗೌಡ ಎಂಬವರ ಮನೆಯಲ್ಲಿ ಸಂತ್ರಸ್ತೆ ಮತ್ತು ಅವರ ಕುಟುಂಬ ಬಾಡಿಗೆಗೆ ವಾಸವಿದ್ದರು. ರಾತ್ರೋರಾತ್ರಿ ಸಂತ್ರಸ್ತೆ ವಾಸವಿದ್ದ ಮನೆಗೆ ನುಗ್ಗಿದ ಐವರು ಆರೋಪಿಗಳ ಗ್ಯಾಂಗ್‌, ತಾವು ‘ಪೀಣ್ಯ ಪೊಲೀಸರ ಇನ್ಫಾರ್ಮರ್ಸ್’ ಎಂದು ಹೇಳಿಕೊಂಡಿದ್ದಾರೆ. “ನಿಮ್ಮ ಮನೆಯಲ್ಲಿ ಗಾಂಜಾ ಮತ್ತು ವೇಶ್ಯವಾಟಿಕೆ ನಡೆಸುತ್ತಿದ್ದೀರಾ” ಎಂದು ಆರೋಪಿಸಿದ್ದಾರೆ. ನಂತರ ಮಾರಕಾಸ್ತ್ರಗಳನ್ನು ತೋರಿಸಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತೆಯ 14 ವರ್ಷದ ಮಗ ಹಾಗೂ ಅವರ ಸ್ನೇಹಿತೆಯ ಮೇಲೂ ಹಲ್ಲೆ ಮಾಡಲಾಗಿದೆ. ಮನೆಯಲ್ಲಿದ್ದ ಗಂಡಸರನ್ನು ಕಟ್ಟಿ ಹಾಕಿ ಥಳಿಸಿದ್ದಾರೆ. 

   ಬಳಿಕ ದುಷ್ಕರ್ಮಿಗಳು ಮಹಿಳೆಯನ್ನು ಪಕ್ಕದ ಮನೆಗೆ ಎಳೆದೊಯ್ದು, ಐವರಲ್ಲಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಭೀಕರ ಕೃತ್ಯದ ನಂತರ, ಆರೋಪಿಗಳು ಮನೆಯಲ್ಲಿದ್ದ ಹಣ ಮತ್ತು ಮೊಬೈಲ್ ಫೋನ್‌ಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಸಂತ್ರಸ್ತೆಯ 14 ವರ್ಷದ ಮಗ ಧೈರ್ಯ ಮಾಡಿ ಪೊಲೀಸ್ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ಆರೋಪಿಗಳು ಪರಾರಿಯಾಗಿದ್ದರು.

   ವಿಚಾರ ತಿಳಿದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಗ್ಯಾಂಗ್ ರೇಪ್ ಮತ್ತು ಡಕಾಯಿತಿ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಹಲ್ಲೆಗೊಳಗಾದ ಗಂಡಸರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಕರಣದ ತನಿಖೆಗಾಗಿ ನೆಲಮಂಗಲ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆ ಚುರುಕುಗೊಳಿಸಿದ ಪೊಲೀಸರು, ಕೃತ್ಯ ಎಸಗಿದ ಕಾರ್ತಿಕ್, ಗ್ಲೇನ್ ಮತ್ತು ಸುಯೋಗ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

   ಇನ್ನುಳಿದ ಇಬ್ಬರು ಪರಾರಿ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಸಂತ್ರಸ್ತೆ ವಾಸವಿದ್ದ ಮನೆಯಿಂದ ಸ್ವಲ್ಪ ದೂರದಲ್ಲಿ ವಾಸವಾಗಿದ್ದರು. ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Recent Articles

spot_img

Related Stories

Share via
Copy link