ಮುಂಬೈ:
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಾಣಾವತ್ ರೈತ ಮಹಿಳೆ ಬಗ್ಗೆ 2020ರಲ್ಲಿ ಮಾಡಿದ್ದ ವಿವಾದಾತ್ಮಕ ಟ್ವೀಟ್ ಬಗ್ಗೆ ಭಟಿಂಡಾ ನ್ಯಾಯಾಲಯದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಸೋಮವಾರ ನ್ಯಾಯಾಲಯದಲ್ಲಿ ಹಾಜರಾಗಿದ್ದ ನಟಿ, “ನಾನು ಮಾಡಿದ್ದ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ. ಪ್ರತಿಯೊಬ್ಬ ತಾಯಿ ನನಗೆ ಗೌರವಾನ್ವಿತಳು,” ಎಂದರು.
ಪಂಜಾಬ್ನ ಭಟಿಂಡಾ ಜಿಲ್ಲೆಯ ಬಹದ್ದೂರ್ಗಡ್ ಜಂದಿಯನ್ ಗ್ರಾಮದ 73 ವರ್ಷದ ಮಹಿಂದರ್ ಕೌರ್ ಸಲ್ಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ರೈತರ ಪ್ರತಿಭಟನೆ ವೇಳೆ ಕಂಗನಾ ರಣಾವತ್ ರೈತ ಮಹಿಳೆ ಬಗ್ಗೆ ಮಾಡಿದ್ದ ರಿಟ್ವೀಟ್ನಿಂದ ಇದು ಆರಂಭವಾಗಿದೆ.
ಹಿಮಾಚಲದ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆಯಾದ ಕಂಗನಾ ರಣಾವತ್ ಅವರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವ ಮನವಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯವು, ಕಳೆದ ಸೆಪ್ಟೆಂಬರ್ನಲ್ಲಿ ವೈಯಕ್ತಿಕವಾಗಿ ಹಾಜರಾಗುವಂತೆ ಸೂಚನೆ ನೀಡಿತ್ತು. ನಟಿಯು ಹಾಜರಾಗುವ ಮುನ್ನ ಭಟಿಂಡಾ ನ್ಯಾಯಾಲಯದ ಆವರಣ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಕಂಗನಾ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೀರೆ ಧರಿಸಿ, ಸನ್ಗ್ಲಾಸ್ ಹಾಕಿಕೊಂಡು ನ್ಯಾಯಾಲಯಕ್ಕೆ ಆಗಮಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಂಗನಾ ರಣಾವತ್, “ಮಹಿಂದರ್ ಕೌರ್ ಅವರ ಕುಟುಂಬಸ್ಥರು ತಪ್ಪಾಗಿ ಅರ್ಥೈಸಿಕೊಂಡಿದ್ದು, ಆ ತಪ್ಪು ತಿಳುವಳಿಕೆಗಳಿ ತಾವು ಹೇಗೆ ಬಲಿಯಾದರು ಎಂಬುವುದರ ಬಗ್ಗೆ ಮಹಿಂದರ್ ಕೌರ್ ಹಾಗೂ ಅವರ ಪತಿಗೆ ಸಂದೇಶ ರವಾನಿಸಿದ್ದೇನೆ,” ಎಂದರು.
“ನನ್ನ ಕನಸಿನಲ್ಲೂ ನಾನು ಇಂತಹದ್ದನ್ನು ಊಹಿಸಿರಲಿಲ್ಲ. ಪಂಜಾಬ್ ಅಥವಾ ಹಿಮಾಚಲದ ಪ್ರತಿಯೊಬ್ಬ ತಾಯಿಯೂ ನನಗೆ ಗೌರವಾನ್ವಿತರು. ಈ ಪ್ರಕರಣವನ್ನು ಸರಿಯಾಗಿ ನೋಡಿದರೆ, ನಾನು ಯಾವುದೇ ವೈಯಕ್ತಿಕವಾಗಿ ಅವಮಾನಿಸುವ ಮಾತುಗಳನ್ನಾಡಿಲ್ಲ. ಅದು ಕೇವಲ ಒಂದು ರಿಟ್ವೀಟ್, ಅದರಲ್ಲಿ ಹಲವು ಮಹಿಳೆಯರ ಚಿತ್ರಗಳು ಮೀಮ್ ರೂಪದಲ್ಲಿ ಬಳಸಲಾಗಿತ್ತು,” ಎಂದು ಕಂಗನಾ ಹೇಳಿದ್ದಾರೆ.
ಅಲ್ಲದೇ “ನಾನು ಯಾವುದೇ ವ್ಯಕ್ತಿಯ ವಿರುದ್ಧ ನೇರವಾಗಿ ಟೀಕೆ ಮಾಡಿಲ್ಲ. ಆದರೆ, ತಪ್ಪಾಗಿ ಅರ್ಥೈಸಿಕೊಂಡ ಬಗ್ಗೆ ನನಗೆ ವಿಷಾದವಿದೆ. ಮಹಿಂದರ್ ಕೌರ್ ಅವರ ಪತಿಯೊಂದಿಗೆ ನಾನು ಮಾಡಿರುವ ಟ್ವೀಟ್ ಬಗ್ಗೆ ಮಾತನಾಡಿ ವಿವರಿಸಿದ್ದೇನೆ” ಎಂದು ಕಂಗನಾ ತಿಳಿಸಿದ್ದಾರೆ.
‘ಕಂಗನಾ ರಣಾವತ್ ತಮ್ಮನ್ನು ಶಾಹೀನ್ ಬಾಗ್ನ ಕಾರ್ಯಕರ್ತೆ ಬಿಲ್ಕಿಸ್ ಬಾನೊ ಎಂದು ತಪ್ಪಾಗಿ ಗುರುತಿಸಿ ಮಾನಹಾನಿ ಮಾಡಿದ್ದಾರೆ,’ ಎಂದು ಮಹಿಂದರ್ ಕೌರ್ ಆರೋಪಿಸಿ, 2021ರ ಜನವರಿಯಲ್ಲಿ ಬಠಿಂಡಾದಲ್ಲಿ ಕಂಗಾನ ರಾಣಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ನಾನು ರೈತರ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದೆ. ಆದರೆ ಕಂಗನಾ ನನ್ನನ್ನು ಶಾಹೀನ್ ಬಾಗ್ನಲ್ಲಿ ಭಾಗವಹಿಸಿದ್ದ ‘ದಾದಿ’ ಎಂದು ಗುರುತಿಸಿ ತಪ್ಪು ಮಾಹಿತಿ ಹಂಚಿಕೊಂಡರು ಎಂದು ಮಹಿಂದರ್ ಕೌರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈಗ ರದ್ದುಗೊಂಡಿರುವ ಕೃಷಿ ಕಾನೂನುಗಳ ವಿರುದ್ಧ ರೈತರು ಹಿಂದೆ ಪ್ರತಿಭಟನೆ ಆರಂಭಿಸಿದಾಗಿನಿಂದಲೂ ನಾನು ಭಾಗಿಯಾಗಿದ್ದೇನೆ. ಮಹಿಂದರ್ ಕೌರ್ ತಮ್ಮ ವಯಸ್ಸಾದರೂ, ದೆಹಲಿಗೆ ತೆರಳಿ ಧರಣಿ ಮಾಡಿದ್ದೇನೆ… ನನಗೂ ಶಾಹೀನ್ ಬಾಗ್ನಲ್ಲಿ ಕಾಣಿಸಿಕೊಂಡ ಮಹಿಳೆಯೊಂದಿಗೆ ಯಾವುದೇ ಸಂಬಂಧವಿಲ್ಲ,” ಎಂದು ಮಹಿಂದರ್ ಕೌರ್ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಈ ಹಿಂದೆ ಕಂಗನಾ ರಣಾವತ್ ಅವರು ಈ ದೂರನ್ನು ರದ್ದುಗೊಳಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಆಗಸ್ಟ್ 1ರಂದು ಆ ಅರ್ಜಿಯನ್ನು ತಿರಸ್ಕರಿಸಿತ್ತು.








