ಮಂಡಿ:
2014 ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರು, ಭಾರತ ‘ಹಿಂದೂ ರಾಷ್ಟ್ರ’ವಾಗಬೇಕು ಎಂದು ಸೋಮವಾರ ಹೇಳಿದ್ದಾರೆ.
ಇಂದು ಕುಲುವಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಂಗನಾ, ‘1947 ರಲ್ಲಿ ಪಾಕಿಸ್ತಾನವನ್ನು ಧರ್ಮದ ಆಧಾರದ ಮೇಲೆ ರಚಿಸಲಾಯಿತು. ಹಾಗಾದರೆ ಆ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಏಕೆ ಘೋಷಿಸಲಿಲ್ಲ’ ಎಂದು ಪ್ರಶ್ನಿಸಿದರು. ಅಲ್ಲದೆ ಭಾರತ ಹಿಂದೂ ರಾಷ್ಟ್ರವಾಗಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ” ಎಂದಿದ್ದಾರೆ.
1947 ರ ನಂತರ ಏನು ಅನುಸರಿಸಿದರು. ದೇಶವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾದ ನಂತರ ಹಲವಾರು ದಶಕಗಳ ಕಾಲ ಕಾಂಗ್ರೆಸ್‌ನ ದುರಾಡಳಿತವನ್ನು ನೋಡಿದೆ. ನಮ್ಮ ಪೂರ್ವಜರು ಮೊಘಲರ ಗುಲಾಮಗಿರಿ, ನಂತರ ಬ್ರಿಟಿಷರ ಗುಲಾಮಗಿರಿ ಮತ್ತು ನಂತರ ಕಾಂಗ್ರೆಸ್‌ನ ದುರಾಡಳಿತವನ್ನು ನೋಡಿದ್ದಾರೆ. ಆದರೆ ನಮಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಎಂದು ಕಂಗನಾ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ಅವರ ಎದುರು ಕಂಗನಾ ಕಣಕ್ಕಿಳಿದಿದ್ದಾರೆ. ಮಂಡಿ ಕ್ಷೇತ್ರಕ್ಕೆ ಜೂನ್ 1ರಂದು ಮತದಾನ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ