ಬೆಂಗಳೂರು:
ಪಹಲ್ಗಾಮ್ ಉಗ್ರರ ದಾಳಿ ಬಳಿಕ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ‘ಪ್ರತೀಕಾರ’ ದ ಕೂಗು ಕೇಳಿಬರುತ್ತಿದೆ. ದಾಳಿಯ ಬೆನ್ನಲ್ಲೇ ಕೇಂದ್ರ ಸರಕಾರ ಹಾಗೂ ರಕ್ಷಣಾ ಇಲಾಖೆ ಪ್ರತಿದಾಳಿ ಯ ಅಥವಾ ಯುದ್ಧದ ತಯಾರಿಯಲ್ಲಿದೆ ಎನ್ನುವ ಮಾತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರುತ್ತಿದೆ.
ಈ ನಡುವೆ, ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಹೋರಾಡಲು ಬೇಕಿರುವ ‘ಶಕ್ತಿ’ ಯನ್ನು ದೇಶದ ಸೈನಿಕರಿಗೆ ಸಿಗಲಿಯೆಂದು ವಿಶೇಷ ಪೂಜೆಯನ್ನು ಜಮ್ಮು- ಕಾಶ್ಮೀರದ ಶ್ರೀನಗರ ದಲ್ಲಿರುವ ಆದಿ ಶಂಕರಾ ಚಾರ್ಯರ ಮಠದಲ್ಲಿ ನೆರವೇರಿಸಲಾಗಿದೆ. ಈ ಹವನ-ಹೋಮದ ವಿಶೇಷತೆಯೆಂದರೆ, ಇದರಲ್ಲಿ ಕೇವಲ ಋತ್ವಿಕರು ಮಾತ್ರವಲ್ಲದೇ, ಸಿಆರ್‌ಪಿಎಫ್, ಜಮ್ಮು- ಕಾಶ್ಮೀರ ಪೊಲೀಸರು ಹಾಗೂ ಸೇನಾಧಿಕಾರಿಗಳು ಭಾಗವಹಿಸಿ, ಶಕ್ತಿಗೆ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಈ ಹೋಮದ ನೇತೃತ್ವವನ್ನು ವಹಿಸಿದ್ದು, ಕರುನಾಡಿನ ಅರ್ಚಕರ ತಂಡ ಎನ್ನುವುದು ಮತ್ತೊಂದು ವಿಶೇಷ.
ಕೆಲ ದಿನಗಳ ಹಿಂದೆ ನಡೆದ ಶಂಕರ ಜಯಂತಿಯಂದು ಈ ವಿಶೇಷ ಪೂಜಾ ಕಾರ್ಯವನ್ನು ನೆರವೇರಿಸಿರುವ ತಂಡ, ಜಮ್ಮು-ಕಾಶ್ಮೀರದಲ್ಲಿ ನೆಮ್ಮದಿ, ಶಾಂತಿ ನೆಲಸಬೇಕು. ಪಾಕಿಸ್ತಾನದ ವಿರುದ್ಧದ ಹೋರಾಟಕ್ಕೆ ಸೈನ್ಯಕ್ಕೆ ‘ಬಲ’ ಸಿಗಲಿ ಎನ್ನುವ ಪಾರ್ಥನೆಯನ್ನು ಸಲ್ಲಿಸಲಾಗಿದೆ ಎಂದು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದ ಪುರೋಹಿತರು ಹೇಳಿದ್ದಾರೆ.
