ತೆಲಂಗಾಣ:
ನಿನ್ನೆ ಸಂಜೆ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗು ಇಂದು ಮುಂಜಾನೆ ಮೇದಕ್ ಜಿಲ್ಲೆಯ ಪಾಪಣ್ಣಪೇಟೆ ಮಂಡಲದ ಪೊಡಚನಪಲ್ಲಿ ಗ್ರಾಮದಲ್ಲಿ ಮೃತಪಟ್ಟಿದೆ.
3 ವರ್ಷದ ಸಾಯಿ ವರ್ಧನ್ ಮೃತ ಬಾಲಕ. 3 ವರ್ಷದ ಬಾಲಕ ಸಾಯಿ ವರ್ಧನ್ ತನ್ನ ತಂದೆ ಗೋವರ್ಧನ್ ಮತ್ತು ತಾಯಿ ನವೀನಾ ಜೊತೆ ಗದ್ದೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು.
ರೈತ ಗೋವರ್ಧನ್ ಕೃಷಿ ಚಟುವಟಿಕೆಗಾಗಿ ಬುಧವಾರ ಬೋರ್ವೆಲ್ ಅನ್ನು 120 ಅಡಿ ಅಗೆಸಿದ್ದರು. ಆದರೆ, ನೀರು ಲಭ್ಯವಾಗಿರಲಿಲ್ಲ. ಇದೇ ಬೋರ್ವೆಲ್‌ನಲ್ಲಿ ಇಂದು ಸಂಜೆ ಸ್ವತಃ ಅವರ 3 ವರ್ಷದ ಮಗ ಸಾಯಿ ವರ್ಧನ್ ಬಿದ್ದು ಮೃತಪಟ್ಟಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಮಗುವನ್ನು ರಕ್ಷಿಸಲು ನಿನ್ನೆ ರಾತ್ರಿಯಿಡೀ ಸತತ 11 ಗಂಟೆಗಳ ಕಾಲ ಪೊಲೀಸರು, NDRF ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರಾದರೂ ಆಕ್ಸಿಜನ್ ಕೊರತೆಯಿಂದ ಬಾಲಕ ಸಾವನ್ನಪ್ಪಿದ್ದಾನೆ. ಬೆಳಗ್ಗೆ 4ಗಂಟೆಗೆ ಮಗುವನ್ನು ಮೇಲಕ್ಕೆ ತರಲಾಯಿತು. ಆದರೆ, ದುರದೃಷ್ಟಕ್ಕೆ ಅಷ್ಟರಲ್ಲಾಗಲೇ ಮಗು ಕೊನೆಯುಸಿರೆಳೆದಾಗಿತ್ತು.
ಮಗು ಸಾಯಿ ವರ್ಧನ್ ತಾಯಿ ನವನಿತಾ ಮಾತನಾಡಿ,ಬೋರ್‌ವೆಲ್‌ನಲ್ಲಿ ನೀರು ಸಿಗದಿದ್ದಾಗ ನಿರಾಶರಾಗಿದ್ದೆವು. ಹೀಗಾಗಿ ಯಾವುದೇ ಭದ್ರತಾ ಎಚ್ಚರಿಕೆಗಳನ್ನು ತೆಗೆದುಕೊಳ್ಳದೆ ಅದನ್ನು ಹಾಗೆ ಬಿಟ್ಟಿದ್ದೇವೆ. ಆದರೆ, ನನ್ನ ಮಗು ಅದೇ ಬೋರ್‌ವೆಲ್‌ನಲ್ಲಿ ಇಂದು ಆಟವಾಡುವಾಗ ಕಾಲು ಜಾರಿ ಬೀಳುತ್ತಾನೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ” ಎಂದು ದುಃಖಿಸಿದ್ದಾರೆ.