ತುಮಕೂರು:
ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಹಳೆಯ ಸಮಸ್ಯೆಗಳು ಜೀವಂತ ಇರುವಾಗಲೇ ಮತ್ತಷ್ಟು ಸವಾಲುಗಳು ಹುಟ್ಟಿಕೊಳ್ಳುತ್ತಿವೆ.
ನಾಡು-ನುಡಿಗೆ ಸಂಬಂಧಿಸಿದ ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ, ಅದು ಒಂದು ನೆಲದ–ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಹೊತ್ತುತಂದ ಮಾಧ್ಯಮ. ಆದ್ದರಿಂದಲೇ ಭಾಷೆಗೂ ನೆಲದ ಸಂಸ್ಕೃತಿಗೂ ನಿಕಟ ಸಂಬಂಧ. ಈ ಸಂಬಂಧ ಕ್ಷೀಣಿಸಿದಲ್ಲಿ ಭಾಷೆ ಕೇವಲ ಮಾತನಾಡುವ ಸಂಕೇತವಾಗಿ ಉಳಿದು ವ್ಯವಹಾರಗಳಿಂದ ಮರೆಯಾಗುವ ಅಪಾಯವೂ ಇರುತ್ತದೆ. ಈಗಾಗಲೇ ಸಾಕಷ್ಟು ಭಾಷೆಗಳು ಅವಸಾನದ ಅಂಚಿನಲ್ಲಿರುವುದು ಇದೇ ಕಾರಣಕ್ಕೆ. ಲಿಪಿ ಇಲ್ಲದ ಭಾಷೆಗಳಾದ ಲಂಬಾಣಿ, ತುಳು, ಕೊಡವ ಇತ್ಯಾದಿ ಭಾಷೆಗಳನ್ನು ಇಲ್ಲಿ ಸಾಂಕೇತಿಕವಾಗಿ ಉದಾಹರಿಸಬಹುದು.
ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿರುವ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಕೆಯೂ ಭಾಷೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಮಾನವ ಬುದ್ಧಿಮತ್ತೆಯನ್ನು ಅನುಕರಿಸುವ ಯಂತ್ರವನ್ನು ರಚಿಸುವ ಸಾಮರ್ಥ್ಯ ಸಣ್ಣ ಸಾಧನೆ ಏನಲ್ಲ. ಆಧುನಿಕತೆ ಮತ್ತು ಯಾಂತ್ರೀಕೃತ ಜಗತ್ತಿನೊಳಗೆ ಅಭಿವೃದ್ಧಿ ಪಥದಲ್ಲಿ ಸಾಗಿರುವ ನಮಗೆ ಕೆಲವು ಹೊಸ ಹೊಸ ಆವಿಷ್ಕಾರಗಳು ಬೆರಗು ಮೂಡಿಸುತ್ತವೆ. ಕಾಲಘಟ್ಟಕ್ಕೆ ತಕ್ಕಂತೆ ಇವೆಲ್ಲ ಅನಿವಾರ್ಯ ಆದರೂ ವಾಸ್ತವವಾಗಿ ಮನುಷ್ಯ ಸಂಬಂಧಗಳ ಸಡಿಲಿಕೆ, ಸಂವಹನದ ಅಗಲಿಕೆ ಇಲ್ಲಿಂದಲೇ ಆರಂಭವಾಗುತ್ತದೆ ಎಂಬುದು ಕಳವಳಕಾರಿ ಸಂಗತಿ.
ಕೃತಕ ಬುದ್ಧಿಮತ್ತೆ ಅಳವಡಿಕೆ ನಿರುದ್ಯೋಗ ಹೆಚ್ಚಿಸುತ್ತದೆ. ಇಲ್ಲಿ ನೈತಿಕತೆಯ ಲಕ್ಷಣಗಳು ಇಲ್ಲವಾಗುತ್ತವೆ. ಪರಸ್ಪರ ಚರ್ಚೆ ದೂರವಾಗುತ್ತದೆ. ಮಾನವೀಯ ಮೌಲ್ಯಗಳಿಗೆ ಕೊಡಲಿ ಪೆಟ್ಟು ಬೀಳುವ ಅಪಾಯಗಳು ಹೆಚ್ಚು. ಸಂವಹನ, ಚರ್ಚೆಗಳಿಂದಲೇ ಪರಸ್ಪರ ಸಂಬAಧಗಳು ಗಟ್ಟಿಯಾಗುತ್ತವೆ. ಇದಕ್ಕೆ ಮೂಲ ನೆಲೆ ಒದಗಿಸುವುದೇ ಭಾಷೆ.
ಮಾತೃಭಾಷೆಯಲ್ಲಿ ನಡೆಯುವ ಎಲ್ಲ ಸಂವಹನಗಳು ಹೃದಯಸಂವೇದಿಯಿಂದ ಕೂಡಿರುತ್ತವೆ.
ಭಾಷೆಗೂ-ಬದುಕಿಗೂ ನಿಕಟ ಸಂಪರ್ಕ ಮತ್ತು ಸಂಬಂಧ ಗಟ್ಟಿಯಾದಾಗ ಮಾತೃಭಾಷೆ ಬೆಳೆಯಲು ಸಾಧ್ಯ. ಇಂಗ್ಲಿಷ್, ಹಿಂದಿ ಕಲಿತರವರಿಗಷ್ಟೇ ಉದ್ಯೋಗ ಎಂಬ ಮನೋಭಾವ ಹೆಚ್ಚುತ್ತಿದ್ದು, ಮಕ್ಕಳೆಲ್ಲ ಆಂಗ್ಲ ಶಾಲೆಗಳತ್ತ ಓಡುತ್ತಿದ್ದಾರೆ. ಹಳ್ಳಿಗಳಲ್ಲೂ ಈಗ ಕನ್ನಡ ಶಾಲೆಗಳೆಂದರೆ ಅಸಡ್ಡೆ.
ಪಕ್ಕದಲ್ಲಿಯೇ ಹುಟ್ಟಿಕೊಳ್ಳುವ ಕಾನ್ವೆಂಟ್‌ಗಳಿಗೆ ನೂಕುನುಗ್ಗಲು. ಜೀವನದ ಪಾಠವೇ ಸಿಗದ, ಅಂಕಪಟ್ಟಿ ಉತ್ಪಾದನಾ ಕಾರ್ಖಾನೆಗಳಂತೆ ಶಿಕ್ಷಣ ವ್ಯವಸ್ಥೆ ಬೆಳೆಯುತ್ತಿರುವುದು ಆತಂಕಕಾರಿ. ಬೇರೆ ಭಾಷೆ ತಿಳಿದಿಲ್ಲದ ಈ ನಾಡಿನ ಗ್ರಾಮೀಣ ಜನಸಮೂಹದಲ್ಲಿ ಕನ್ನಡ ಭಾಷೆ ಪ್ರಚಲಿತದಲ್ಲಿದೆ. ಆದರೆ ಹಳ್ಳಿಗಳಲ್ಲೂ ಕಾನ್ವೆಂಟ್ ನಂತರ ಆಂಗ್ಲ ಶಾಲೆಗಳು ದಾಂಗುಡಿ ಇಟ್ಟಿರುವುದರಿಂದ ಅಲ್ಲಿಯೂ ಮಾತೃಭಾಷೆ ಕ್ಷೀಣವಾಗಬಹುದು.
ಶೂನ್ಯ ದಾಖಲಾತಿ, ಮಕ್ಕಳ ದಾಖಲಾತಿ ಕೊರತೆ, ಶಿಕ್ಷಕರ ಕೊರತೆ ಹೀಗೆ ನಾನಾ ಕಾರಣಗಳಿಂದ ಸರ್ಕಾರಿ ಶಾಲೆಗಳು ಸದ್ದಿಲ್ಲದೆ ಮುಚ್ಚಿ ಹೋಗುತ್ತಿವೆ. ಈ ಬಾರಿ 567 ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿವೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ. 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ 48,066 ಸರ್ಕಾರಿ ಶಾಲೆಗಳಿದ್ದರೆ, ಈ ವರ್ಷ 47,499ಕ್ಕೆ ಕುಸಿದಿದೆ. ವಿವಿಧ ಕಾರಣಗಳ ನೆಪವೊಡ್ಡಿ ಪಕ್ಕದ ಶಾಲೆಗಳೊಂದಿಗೆ ವಿಲೀನಗೊಳಿಸುತ್ತಿರುವ ಪ್ರಕ್ರಿಯೆಗಳು ನಡೆದಿವೆ.
ಕೋವಿಡ್ ಸಂದರ್ಭದಲ್ಲಿ ಹಳ್ಳಿಗಳ ಕಡೆಗೆ ಮುಖ ಮಾಡಿದವರ ಸಂಖ್ಯೆ ಹೆಚ್ಚಿತು. ಆ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾತಿಯೂ ಹೆಚ್ಚಳವಾಯಿತು. ಆದರೆ ಕ್ರಮೇಣ ಆ ಉತ್ಸಾಹ ಈಗ ಕಂಡುಬರುತ್ತಿಲ್ಲ. ಖಾಸಗಿ ಶಾಲೆಗಳತ್ತ ಹೋಗುವವರ ಸಂಖ್ಯೆ ಅಧಿಕವಾಗುತ್ತಿದೆ. ಇದಕ್ಕೆ ಕಾರಣಗಳೇನು ಎಂಬ ಬಗ್ಗೆ ಆತ್ಮಾವಲೋಕನಗಳೇ ನಡೆಯುತ್ತಿಲ್ಲ.
ಭಾಷೆಗೆ ಪೂರಕವಾಗುವ ಸಾಹಿತ್ಯದ ಅಧ್ಯಯನ, ಕನ್ನಡ ಮಾಧ್ಯಮದ ಶಿಕ್ಷಣದ ಕೊರತೆ ಕ್ಷೀಣಿಸುತ್ತಿದೆ. ಇಂಜಿನಿಯರಿಂಗ್, ಮೆಡಿಕಲ್, ವೃತ್ತಿಪರ ಕೋರ್ಸ್ಗಳಲ್ಲಿ ಭಾಷಾ ಅಧ್ಯಯನದ ಅವಕಾಶಗಳ ಕೊರತೆ ಎದ್ದು ಕಾಣುತ್ತಿದೆ. ಕನ್ನಡ ತಾಂತ್ರಿಕ ಬೋಧನೆಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ. ಹೆಚ್ಚು ಆಂಗ್ಲಭಾಷೆಯಲ್ಲಿಯೇ ವ್ಯವಹರಿಸುವ ಸಂಪ್ರದಾಯಗಳು ಹೆಚ್ಚಾಗುತ್ತಿವೆ. ವೃತ್ತಿ ಶಿಕ್ಷಣ ಪೂರೈಸಿದವರು, ಉನ್ನತ ವ್ಯಾಸಂಗ ಮಾಡಿದವರು ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ.
ರಾಜ್ಯದಲ್ಲಿಯೇ ಇರುವ ಕಂಪನಿಗಳೆಲ್ಲಾ ದೊಡ್ಡ ಉದ್ಯಮಿಗಳ ಹಿಡಿತದಲ್ಲಿ ಇರುವ ಕಾರಣ ಅಲ್ಲೆಲ್ಲಾ ಭಾಷಾ ಬೆಳವಣಿಗೆಗೆ ಯಾವುದೇ ಪೂರಕ ವಾತಾವರಣಗಳಿಲ್ಲ. ಕನ್ನಡ ನಾಡು ನುಡಿಗೆ ಸಂಬAಧಿಸಿದ ಚಿಂತನೆ, ಭಾಷಾ ಬೆಳವಣಿಗೆಗೆ ಬೇಕಾದ ವ್ಯವಸ್ಥೆಗಳೆ ಇಲ್ಲವಾಗುತ್ತಿರುವುದು ದುರಂತ.
ಕನ್ನಡ ಶಾಲೆಗಳು ಅವನತಿ ಹೊಂದುತ್ತಿರುವ ಸನ್ನಿವೇಶದಲ್ಲಿ, ಅಕ್ಷರ ತಿಳಿಯದ ಯುವ ಜನರ ಈ ಕಾಲಘಟ್ಟದಲ್ಲಿ ಭಾಷಾ ಬೆಳವಣಿಗೆಯ ಚಿಂತನೆಗಳಿಗೆ ಹೆಚ್ಚು ಒತ್ತು ಕೊಡುವ ಅನಿವಾರ್ಯತೆ ಇದೆ. ಬೌದ್ಧಿಕ ನೆಲೆಯಲ್ಲಿ ಭಾಷೆ ಕುರಿತ ಸಾಹಿತ್ಯಕ ಸಂಶೋಧನೆ, ಸಾಹಿತ್ಯ ರಚನೆ, ಸಾಂಸ್ಕೃತಿಕ ವಾತಾವರಣ, ಶೈಕ್ಷಣಿಕ ನೆಲೆಗಟ್ಟು ಇವೆಲ್ಲವೂ ಹೆಚ್ಚು ವಿಸ್ತಾರಗೊಳ್ಳಬೇಕು.
ಇದಕ್ಕಾಗಿಯೇ ಇರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಗಡಿನಾಡ ಅಭಿವೃದ್ಧಿ ಪ್ರಾಧಿಕಾರ ಮುಂತಾದ ಸಾಂಸ್ಥಿಕ ನೆಲೆಗಳು ಹೆಚ್ಚು ಕ್ರಿಯಾಶೀಲಗೊಳ್ಳಬೇಕು. ವಿಶ್ವದ ಬೇರೆ ಬೇರೆ ರಾಷ್ಟçಗಳು ಇಲ್ಲಿ ತಮ್ಮ ಕಂಪನಿಗಳನ್ನು ತೆರೆಯಲು ಬಂಡವಾಳ ಹೂಡಿಕೆ ಮಾಡುತ್ತಿದ್ದು, ಅಂತಹ ಕಡೆಗಳಲ್ಲಿ ಸ್ಥಳೀಯರಿಗೆ ಹೆಚ್ಚು ಅವಕಾಶಗಳು ಸಿಗುವಂತಾಗಬೇಕು.
ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಸವಾಲುಗಳ ಸಂದರ್ಭದಲ್ಲಿ ಈ ಎಲ್ಲ ಆಯಾಮಗಳು ಒಂದಕ್ಕೊಂಡು ಪೂರಕ ಎಂಬುದನ್ನು ಮರೆಯಲಾಗದು. ಎಲ್ಲಿಂದಲೋ ಬಂದವರು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ, ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಾರೆ. ಇಲ್ಲಿರುವವರು ದಯನೀಯ ಸ್ಥಿತಿಯಲ್ಲಿ ಇದ್ದಾರೆ ಅಥವಾ ಬೇರೆ ಕಡೆಗೆ ವಲಸೆ ಹೋಗುತ್ತಾರೆ. ಇದು ಸದ್ಯದ ಪರಿಸ್ಥಿತಿ.
ನಾಡುನುಡಿ, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾದ ಸಂದರ್ಭದಲ್ಲಿ ಕನ್ನಡ ಸಂಘಟನೆಗಳು ಹೋರಾಟಕ್ಕೆ ಇಳಿದ ಉದಾಹರಣೆಗಳು ಸಾಕಷ್ಟಿವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಸಂಘಟನೆಗಳು, ಸಾಹಿತ್ಯ ಪರಿಷತ್ ಆದಿಯಾಗಿ ನಾಡುನುಡಿಯ ಬಗ್ಗೆ ಸಕ್ರಿಯವಾಗಿರಬೇಕಾದ ಸಂಸ್ಥೆಗಳೆಲ್ಲಾ ನೇಪಥ್ಯಕ್ಕೆ ಸರಿಯುತ್ತಿವೆಯೇನೋ ಎನ್ನುವ ಭಾಸವಾಗುತ್ತಿದೆ. ಭಾಷಾಭಿವೃದ್ಧಿಯ ಚಿಂತನೆಗಳು, ಹೋರಾಟಗಳಿಗಿಂತ ಇತರೆ ಹೋರಾಟಗಳೇ ಹೆಚ್ಚುತ್ತಿವೆ. ಶಾಂತಿ ಸುವ್ಯವಸ್ಥೆ ಕ್ಷೀಣಿಸುವ ವಾತಾವರಣವೆ ಕಂಡುಬರುತ್ತಿದೆ.
ಈಗಿನ ಪೀಳಿಗೆ ಸಾಹಿತ್ಯಾತ್ಮಕ ಚಟುವಟಿಕೆಗಳಿಂದ ದೂರವೇ ಉಳಿಯುತ್ತಿದೆ. ಇವರಲ್ಲಿ ಭಾಷಾ ಆಸಕ್ತಿಯ ಕೊರತೆ ಕಂಡುಬರುತ್ತಿದೆ. ಚರಿತ್ರೆ, ವರ್ತಮಾನದ ಸಂಗತಿಗಳ ಚಿಂತನೆ ಬೇಕಾಗಿಲ್ಲ. ಇಂಗ್ಲಿಷ್ ಭಾಷೆಗೆ ತೊಡಗಿಸಿಕೊಳ್ಳುವ ಹೆಣಗಾಟದಲ್ಲಿ ಅತ್ತ ಇಂಗ್ಲಿಷ್ ಬಳಕೆಯೂ ಸರಿ ಇಲ್ಲದೆ, ಕನ್ನಡ ಸ್ವಚ್ಛ ಉಚ್ಛಾರಣೆ ಇಲ್ಲದೆ ಕಂಗ್ಲೀಷ್ ಪದ ಪ್ರಯೋಗಗಳು ಹೆಚ್ಚಾಗಿ ಅರ್ಥ ಕಳೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಯುವ ಪೀಳಿಗೆಯಲ್ಲಿ ಭಾಷಾಭಿಮಾನ, ನಾಡು ನುಡಿಗೆ ಹೋರಾಡಿದವರ ಜೀವನ ಚರಿತ್ರೆ, ವರ್ತಮಾನಗಳ ಅರಿವು ಮೂಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಕನ್ನಡ ಭಾಷೆಗೆ ಮತ್ತಷ್ಟು ಕುಂದು ಬರುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಕನ್ನಡ ಸಂಘಟನೆಗಳು, ಕನ್ನಡಪರ ಹೋರಾಟಗಾರರು, ಸರ್ಕಾರಗಳು, ಪೋಷಕರು ಎಚ್ಚೆತ್ತುಕೊಳ್ಳಬೇಕು.
ಸಂಪಾದಕರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ