ಭುವನೇಶ್ವರ್ :
ಫನಿ ಚಂಡಮಾರುತದಿಂದ ರಾಜ್ಯಕ್ಕೆ ಸುಮಾರು 12 ಸಾವಿರ ಕೋಟಿ ರೂ. ನಷ್ಟವಾಗಿದೆ. 64 ಜನ ಮೃತಪಟ್ಟಿದ್ದಾರೆ, ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ ಎಂದು ಒಡಿಶಾ ಸರ್ಕಾರ ಕೇಂದ್ರಕ್ಕೆ ತಾತ್ಕಾಲಿಕ ವರದಿ ಸಲ್ಲಿಸಿದೆ.
ಫನಿ ಚಂಡಮಾರುತದ ರಭಸಕ್ಕೆ ಒಡಿಶಾ ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ವಿದ್ಯುತ್ ಕಂಬಗಳ ಧರೆಗುರುಳಿವೆ. ಇದನ್ನು ಸರಿಪಡಿಸಲು ಹಣ ಹಾಗೂ ನಿಪುಣ ಕೆಲಸಗಾರರ ಕೊರತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಸಹಾಯ ಮಾಡಬೇಕು. ಶೀಘ್ರದಲ್ಲಿ 5 ಸಾವಿರ ನಿಪುಣ ಕೆಲಸಗಾರರನ್ನು ರಾಜ್ಯಕ್ಕೆ ಪೂರೈಕೆ ಮಾಡಬೇಕು ಎಂದು ಕಳೆದ ವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೇಂದ್ರಕ್ಕೆ ಮನವಿ ಮಾಡಿದ್ದರು.
ಫನಿ ಚಂಡಮಾರುತದ ಒಡಿಶಾವನ್ನು ದಾಟಿ 12 ದಿನಗಳೇ ಕಳೆದಿವೆ. ಆದರೂ ಕರಾವಳಿ ಜಿಲ್ಲೆಗಳಿಗೆ ಈವರೆಗೆ ವಿದ್ಯುತ್ ವ್ಯವಸ್ಥೆ ನೀಡುವುದು ಸಾಧ್ಯವಾಗಿಲ್ಲ. ಪರಿಣಾಮ ಪುರಿ ಸೇರಿದಂತೆ ಹಲವಾರು ಜಿಲ್ಲೆಗಳು ಈಗಲೂ ಕತ್ತಲಲ್ಲೇ ಕಾಳ ಕಳೆಯುವಂತಾಗಿದೆ.
ಫನಿ ಚಂಡಮಾರುತದಿಂದ ಉಂಟಾದ ನಷ್ಟದ ಕುರಿತು ಅಂದಾಜಿಸಲು ಬುಧವಾರ ಕೇಂದ್ರ ತಂಡ ಬುಧವಾರ ಒಡಿಶಾಗೆ ಭೇಟಿ ನೀಡಿತ್ತು. ಈ ವೇಳೆ ರಾಜ್ಯ ಸರ್ಕಾರ ಕೇಂದ್ರದ ತಂಡಕ್ಕೆ 12 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಪ್ರಾಥಮಿಕ ವರದಿ ಸಲ್ಲಿಸಿದೆ. ಅಲ್ಲದೆ ಇದು ಅಂದಾಜಿನ ನಷ್ಟದ ಪ್ರಮಾಣವಾಗಿದ್ದು, ನಷ್ಟದ ವಾಸ್ತವಿಕ ಪ್ರಮಾಣ ತಿಳಿಯಲು ಅಧಿಕಾರಿಗಳು ಶೀಘ್ರದಲ್ಲಿ ಮನೆ ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆಯಲ್ಲಿ ನಷ್ಟದ ಪ್ರಮಾಣ ಅಧಿಕವಾಗುವ ಸಾಧ್ಯತೆ ಇದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ವಿವರವಾದ ವರದಿಯನ್ನು ಸಿದ್ದಪಡಿಸಲಾಗುವುದು ಎಂದು ಒಡಿಶಾ ರಾಜ್ಯ ಸರ್ಕಾರದ ವಿಶೇಷ ಪರಿಹಾರ ಆಯುಕ್ತ ಬಿ.ಪಿ. ಸೇಠಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ