ಭೋಪಾಲ್:
ಗಣೇಶ ಮೂರ್ತಿ ವಿಸರ್ಜನೆ ವೇಳೆ ದೋಣಿ ಮುಳುಗಿ 13 ಜನರು ಮೃತಪಟ್ಟು ಹಲವರು ನಾಪತ್ತೆಯಾದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ಖತ್ಲಾಪುರ ಘಾಟ್ ನಲ್ಲಿ ನಡೆದಿದೆ.
ಶುಕ್ರವಾರ ಮುಂಜಾನೆ 4-30ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಮುಳುಗಡೆಯಾಗಿರುವ ಇನ್ನೂ ಹಲವರ ಹುಡುಕಾಟ ಭರದಿಂದ ನಡೆಯುತ್ತಿದೆ.
ಮುಳುಗು ತಜ್ಞರೊಂದಿಗೆ 40 ಮಂದಿ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಇದುವರೆಗೆ 13 ಶವಗಳನ್ನು ಎನ್‌ಡಿಆರ್‌ಎಫ್ ಪಡೆ ಪತ್ತೆ ಹಚ್ಚಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದ್ದು, ಒಟ್ಟು ಎರಡು ದೋಣಿಗಳಲ್ಲಿ ಎಷ್ಟು ಜನರಿದ್ದರು? ಎಂಬ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕತ್ಲಾಪುರ ಎಂಬಲ್ಲಿ ಇಟ್ಟಿದ್ದ ದೊಡ್ಡ ಗಣೇಶಮೂರ್ತಿಯನ್ನು ಎರಡು ದೋಣಿಗಳಲ್ಲಿ ಇಟ್ಟುಕೊಂಡು ವಿಸರ್ಜನೆ ಮಾಡಲು ತೆಗೆದುಕೊಂಡು ಹೋಗಲಾಗಿತ್ತು. ಎರಡು ದೋಣಿಯಲ್ಲಿದ್ದ ಯಾರೂ ಸಹ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗಣೇಶ ವಿಗ್ರಹದ ಭಾರ ಹೆಚ್ಚಾದ ಕಾರಣ ನದಿಯಲ್ಲಿ ದೋಣಿ ಒಂದು ಕಡೆ ವಾಲಿದ್ದು ಮುಳುಗಿ ಹೋಗಿದೆ.
ರಾಜ್ಯದ ಸಚಿವ ಪಿ.ಸಿ. ಶರ್ಮಾ ಮೃತರ ಕುಟುಂಬ ಸದಸ್ಯರಿಗೆ ತಲಾ 4 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಜಿಲ್ಲಾಧಿಕಾರಿಗಳಿಂದ ಪರಿಹಾರವನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
