20 ಸೆಂ.ಮೀಟರ್ ಉದ್ದದ ತರಕಾರಿ ಕತ್ತರಿಸುವ ಚಾಕು ನುಂಗಿದ್ದ ವ್ಯಕ್ತಿಗೆ ಏಮ್ಸ್ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಚಾಕು ಹೊರಗಡೆ ತೆಗೆದಿರುವ ಘಟನೆ ನಡೆದಿದೆ.
28 ವರ್ಷದ ವ್ಯಕ್ತಿಗೆ ಕುಡಿತದ ಚಟವಿತ್ತು. ಜೊತೆಗೆ ಗಾಂಜಾ ಕೂಡ ಸೇವಿಸುತ್ತಿದ್ದ. ಲಾಕ್ಡೌನ್ ಸಮಯದಲ್ಲಿ ಕುಡಿತಕ್ಕೆ ಏನೂ ಸಿಗದಿದ್ದಾಗ ಒಂದು ಬಟ್ಟಲಲ್ಲಿ ನೀರು ತೆಗೆದುಕೊಂಡು ಅದರ ಜೊತೆಗೆ ಚಾಕು ನುಂಗಿದ್ದಾನೆ. ಇದಾಗಿ ಒಂದೂವರೆ ತಿಂಗಳವರೆಗೆ ಆತ ಯಾರಿಗೂ ಏನನ್ನೂ ಹೇಳಿಲ್ಲ.
ಹೊಟ್ಟೆ ನೋವು ಆರಂಭವಾದಾಗ ಸಫ್ದರ್ಜಂಗ್ ಆಸ್ಪತ್ರೆಗೆ ಹೋಗಿದ್ದಾನೆ. ಎಕ್ಸ್ರೇ ಮಾಡಿಸಿದ ವೈದ್ಯರಿಗೆ ಹೊಟ್ಟೆಯಲ್ಲಿ ಚಾಕು ಇರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಏಮ್ಸ್ಗೆ ಕೊಂಡೊಯ್ಯುವಂತೆ ಹೇಳಿದ್ದಾರೆ.
ಏಮ್ಸ್ ಆಸ್ಪತ್ರೆಯ ಎನ್.ಆರ್.ದಾಸ್ ನೇತೃತ್ವದ ವೈದರ ತಂಡ ಶ್ವಾಸಕೋಶ, ರಕ್ತನಾಳ ಹಾಗೂ ಲಿವರ್ಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಚಾಕು ಹೊರ ತೆಗೆದಿದ್ದಾರೆ.
ಅಮಲಿನ ದಾಸರಾದವರು ಸೈಕೋಸಿಸ್ ಕಾಯಿಲೆಗೆ ಒಳಗಾಗುತ್ತಾರೆ. ಇದಕ್ಕೆ ಚಿಕಿತ್ಸೆ ಪಡೆಯದೇ ಉಲ್ಬಣಿಸಿದಲ್ಲಿ ರೋಗಿಗಳು ಸೇಫ್ಟಿ ಪಿನ್ಗಳನ್ನು ನುಂಗುವ ಗೀಳಿಗೆ ಒಳಗಾಗುತ್ತಾರೆ. ಚಮಚಗಳು ಹಾಗೂ ಇತರ ಲೋಹದ ವಸ್ತುಗಳನ್ನು ಗಂಟಲಲ್ಲಿ ಇಳಿಸಿಕೊಳ್ತಾರೆ ಎನ್ನುತ್ತಾರೆ ಏಮ್ಸ್ ವೈದ್ಯ ಡಾ. ನಿಹಾರ್ ರಂಜನ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ