ಚೆನ್ನೈ:
ಟಿಕ್‍ಟಾಕ್ ವಿಡಿಯೋ ಆ್ಯಪ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ಪತ್ನಿಯನ್ನು ಬೈದಿದ್ದಕ್ಕೆ ಮನನೊಂದ ಆಕೆ ಟಿಕ್‍ಟಾಕ್ ಮಾಡುತ್ತಲೇ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರ್ನಲ್ಲಿ ನಡೆದಿದೆ.
24 ವರ್ಷದ ಅನಿತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅನಿತಾಗೆ ಪಳನಿವೇಲ್(24) ಎಂಬುವರೊಂದಿಗೆ ವಿವಾಹವಾಗಿದ್ದು, ನಾಲ್ಕು ವರ್ಷದ ಹೆಣ್ಣು ಮಗಳು ಹಾಗೂ ಎರಡು ವರ್ಷದ ಗಂಡು ಮಗುವಿನ ತಾಯಿಯಾಗಿದ್ದಳು. ಕೃಷಿ ವ್ಯಾಪಾರಿಯಾಗಿರುವ ಪತಿ ಪಳನಿವೇಲ್, ಕಳೆದ ಕೆಲ ವರ್ಷಗಳ ಹಿಂದೆ ಕೆಲಸಕ್ಕಾಗಿ ಸಿಂಗಾಪೂರ್ಗೆ ತೆರಳಿದ್ದಾರೆ.
ತನ್ನ ಸ್ನೇಹಿತೆಯಿಂದ ಅನಿತಾಗೆ ಆ್ಯಪ್ ಪರಿಚಯವಾಗಿತ್ತಂತೆ. ಆ್ಯಪ್ ಗೀಳಿಗೆ ಒಳಗಾಗಿ ತನ್ನ ಕುಟುಂಬ ಮತ್ತು ಮಕ್ಕಳನ್ನು ಆಲಕ್ಷಿಸಿದ್ದಳು ಎಂದು ಅನಿತಾ ಪಾಲಕರು ಆರೋಪಿಸಿದ್ದಾರೆ. ಆ್ಯಪ್ ಬಳಸುತ್ತಾ ಅತಿರೇಕಕ್ಕೆ ಹೋಗಿದ್ದ ಆಕೆಯ ಬಗ್ಗೆ ಪಾಲಕರು ಪತಿಗೆ ತಿಳಿಸಿದಾಗ, ಕರೆ ಮಾಡಿ ಅದರಿಂದ ದೂರವಿರುವಂತೆ ಆಕೆಗೆ ಆತ ಹೇಳಿದ್ದನಂತೆ. ಆದರೆ, ಅದನ್ನು ನಿರ್ಲಕ್ಷಿಸಿ ಆಕೆ ಆ್ಯಪ್ ಮುಂದುವರಿಸಿದ್ದಳು ಎನ್ನಲಾಗಿದೆ. ಎಷ್ಟು ಹುಚ್ಚು ಹಿಡಿದಿದ್ದಳು ಅಂದರೆ ಇಬ್ಬರ ಮಕ್ಕಳ ಬಗ್ಗೆ ಗಮನಕೊಡದೇ ಟಿಕ್ ಟಾಕ್ ಮಾಡುವುದರಲ್ಲೇ ಸಮಯ ಕಳೆಯುತ್ತಿದ್ದಳು. ಲೈಕ್‍ಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡುತ್ತಿದ್ದಳು.
ಈ ಬಗ್ಗೆ ಪಾಲಕರು ಮತ್ತೊಮ್ಮೆ ಆಕೆಯ ಪತಿಗೆ ಕರೆ ಮಾಡಿ ಬುದ್ಧಿ ಹೇಳಲು ತಿಳಿಸಿದಾಗ, ಅನಿತಾಗೆ ಕರೆ ಮಾಡಿದ ಆತ, ಆಕೆಯ ವಿರುದ್ಧ ರೇಗಿ ಮೊಬೈಲ್ ಅನ್ನು ಹೊಡೆದು ಹಾಕುವುದಾಗಿ ಎಚ್ಚರಿಸಿದ್ದನಂತೆ. ಇದರಿಂದ ಮನನೊಂದು ಅನಿತಾ, ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆತ್ಮಹತ್ಯೆಗೂ ಮುನ್ನ ನನ್ನ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಹೇಳಿ, ಆ ಕ್ಷಣವನ್ನು ವಿಡಿಯೋ ರೆಕಾರ್ಡ್ ಮಾಡಿ, ಅದನ್ನು ಟಿಕ್ ಟಾಕ್ನಲ್ಲೇ ಹರಿಬಿಟ್ಟಿದ್ದಾಳೆ ಎನ್ನಲಾಗಿದೆ. ಇದನ್ನು ನೋಡಿದ ನೆರೆಹೊರೆವರು ತಕ್ಷಣ ಮನೆಗೆ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಅನಿತಾ ಮೃತಪಟ್ಟಿದ್ದಾಳೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
