ವಿಶ್ವಸಂಸ್ಥೆ:
ಭಯೋತ್ಪಾದನೆಗೆ ನಿರಂತರವಾಗಿ ಕುಮ್ಮಕ್ಕು ಕೊಡುತ್ತಿರುವ ಜೈಶ್-ಇ-ಮೊಹ್ಮದ್ ಸಂಘಟನೆಯ ಸ್ಥಾಪಕ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ಕಪ್ಪುಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಮಹತ್ವದ ರಾಜತಾಂತ್ರಿಕ ಯಶಸ್ಸು ಲಭ್ಯವಾಗಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಈ ಪ್ರಯತ್ನವನ್ನು ವಿಶ್ವದ ದೈತ್ಯ ರಾಷ್ಟ್ರಗಳಾಗಿರುವ ಅಮೆರಿಕಾ, ಫ್ರಾನ್ಸ್ ಮತ್ತು ಇಂಗ್ಲಂಡ್ ಬೆಂಬಲಿಸಿವೆ. ಆದರೆ ಭಾರತದ ನೆರೆ ರಾಷ್ಟ್ರ ಚೀನಾ ಮಾತ್ರ ಈ ಬಾರಿಯೂ ಅಡ್ಡಗಾಲು ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೈಶ್ ಉಗ್ರ ಸಂಘಟನೆಯನ್ನು ಸ್ಥಾಪಿಸಿ, ಅದನ್ನು ಬೆಳೆಸುವಲ್ಲಿ ಮಸೂದ್ ಅಜರ್ ಪಾತ್ರ ದೊಡ್ಡದಿದೆ. ಇತ್ತೀಚೆಗೆ ನಡೆದ ಪುಲ್ವಾಮಾ ದಾಳಿ ಸೇರಿ ಅನೇಕ ಪ್ರಮುಖ ದಾಳಿಯ ಹೊಣೆಯನ್ನು ಈ ಸಂಘಟನೆ ಹೊತ್ತಿದೆ. ಹಾಗಾಗಿ, ಈತನ ವಿರುದ್ಧ ನಿರ್ಬಂಧ ಹೇರಬೇಕು ಎಂದು 2016 ಮತ್ತು 2017ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬಳಿ ಮನವಿ ಮಾಡಿಕೊಳ್ಳಲಾಗಿತ್ತು.
ಆದರೆ, ಎರಡೂ ಬಾರಿ ಚೀನಾ ಈ ನಿರ್ಧಾರಕ್ಕೆ ತಣ್ಣೀರೆರೆಚಿದೆ. ಈಗ ಎಲ್ಲ ರಾಷ್ಟ್ರಗಳು ಮತ್ತೆ ಒಂದಾಗಿ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ನಿರ್ಧಾರಕ್ಕೆ ಮುಂದಾಗಿದ್ದು, ಈ ಬಾರಿಯಾದರೂ ವಿಶ್ವಸಂಸ್ಥೆಯಲ್ಲಿ ಚೀನಾದ ನಿಲುವು ಬದಲಾಗುತ್ತದೆಯೋ ಎಂದು ಕಾದುನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
