ದೆಹಲಿ:
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಅಯೋಧ್ಯೆ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಸಂಧಾನದ ಮೂಲಕ ಕಾಲಮಿತಿಯಲ್ಲಿ ಬಗೆಹರಿಸಿಕೊಳ್ಳಬೇಕು. ಸಂಧಾನ ಪ್ರಕ್ರಿಯೆ ರಹಸ್ಯವಾಗಿರಬೇಕು. ಸೋರಿಕೆಯಾಗಬಾರದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಇಂದು ಮಹತ್ವದ ಆದೇಶ ನೀಡಿದೆ.
ಅಯೋಧ್ಯೆ ವಿವಾದ ಮಧ್ಯಸ್ಥಿಕೆ ಮೂಲಕ ಇತ್ಯರ್ಥವಾಗಲು ಸುಪ್ರೀಂಕೋರ್ಟ್ ಮೂವರು ಸಂಧಾನಕಾರರ ನೇಮಕ ಮಾಡಿದ್ದು, ಜಸ್ಟಿಸ್ ಇಬ್ರಾಹಿಂ ಖಲೀಫುಲ್ಲಾ, ರವಿಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಾಂಚು ಅವರನ್ನು ಸಂಧಾನಕಾರರನ್ನಾಗಿ ನೇಮಿಸಿ ಸುಪ್ರೀಂ ಆದೇಶ ಹೊರಡಿಸಿದೆ. ಇವರುಗಳ ನೇತೃತ್ವದಲ್ಲಿ ಸಂಧಾನ ಪ್ರಕ್ರಿಯೆ ನಡೆಯಲಿದೆ.
ಈ ಪ್ರಕ್ರಿಯೆ ಒಂದು ವಾರದೊಳಗೆ ಆರಂಭವಾಗಬೇಕು. ನಾಲ್ಕು ವಾರದಲ್ಲಿ ಸಂಧಾನದ ಫಲಶುೃತಿ ಲಭಿಸಬೇಕು. ಎರಡು ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಯಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಉತ್ತರಪ್ರದೇಶದ ಫೈಝಾಬಾದ್‌ನಲ್ಲಿ ಸಂಧಾನ ಪ್ರಕ್ರಿಯೆ ನಡೆಯಲಿದೆ.
ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್, ತನ್ನ ತೀರ್ಪಿನಲ್ಲಿ ಸಂಧಾನಕ್ಕೆ ಒಪ್ಪಿಗೆ ಸೂಚಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ