ಮೀನುಗಾರರ ಸುರಕ್ಷತೆಗೆ ಸ್ಯಾಟ್‍ಲೈಟ್   ಪೋನ್‍ಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ : ಮೀನುಗಾರಿಕಾ ಸಚಿವ

ಬೆಂಗಳೂರು:

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಮೀನುಗಾರರ ಸುರಕ್ಷತೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆಳಸಮುದ್ರ ಮೀನುಗಾರರು ಸ್ಯಾಟ್‍ಲೈಟ್   ಪೋನ್‍ಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಆದೇಶಿಸಿದ್ದಾರೆ.

ನಗರದ ಜೆ.ಪಿ.ಭವನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನುಗಾರರು ಮೀನು ಹಿಡಿಯುವ ಸಂದರ್ಭದಲ್ಲಿ ಸುರಕ್ಷತೆ ಕಡೆಗೂ ಗಮನಹರಿಸಬೇಕು. ಆಳಸಮುದ್ರದಲ್ಲಿ ಮೀನು ಹಿಡಿಯುವ ಮೀನುಗಾರರಿಗೆ ಖಾಸಗಿ ಸಂಸ್ಥೆಯೊಂದರ ಸಹಯೋಗದಲ್ಲಿ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಸ್ಯಾಟ್‍ಲೈಟ್ ಪೋನ್‍ಗಳನ್ನು ಇಲಾಖೆಯಿಂದ ಮೀನುಗಾರರಿಗೆ ವಿತರಿಸಲಾಗುವುದು ಎಂದರು.

ಕಾಣೆಯಾಗಿರುವ ಮೀನುಗಾರರು ಬಳಸಿದ್ದರು ಎನ್ನಲಾದ ಸುವರ್ಣ ತ್ರಿಭುಜ ಬೋಟ್‍ನಲ್ಲಿದ್ದ ಎರಡು ಮೀನು ಪಂಜರಗಳು ಸಿಕ್ಕಿದ್ದು, ಸ್ಥಳೀಯ ಮೀನುಗಾರರು ಅವನ್ನುಪೊಲೀಸರಿಗೆ ಒಪ್ಪಿಸಿದ್ದಾರೆ. ನಾಪತ್ತೆಯಾದ ಮೀನುಗಾರರ ತನಿಖೆ ತೀವ್ರಗೊಂಡಿದೆ. ಮೀನುಗಾರರ ಪತ್ತೆ ಸಂಬಂಧ ಶುಕ್ರವಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಹಾರಾಷ್ಟ್ರ ಮತ್ತು ಗೋವಾ, ಕೇಂದ್ರ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ.

 ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಕುಮಟಾ, ಹೊನ್ನಾವರ ಮತ್ತು ಉಡುಪಿ ಮೀನುಗಾರರು ಕಾಣೆಯಾಗಿದ್ದು, ಡಿ.15 ರ ಮಧ್ಯಾಹ್ನ 1 ಗಂಟೆಯವರೆಗೂ ಅವರು ಸಂಪರ್ಕದಲ್ಲಿದ್ದು, ನಂತರ ಸಂಪರ್ಕ ಕಡಿದುಹೋಗಿದೆ. ಡಿ.20 ರಂದು ಮೀನುಗಾರರ ಕಾಣೆಯಾದ ಬಗ್ಗೆ ದೂರು ಬಂದಿದೆ.

   ಕರಾವಳಿ ತೀರ, ಕೇಂದ್ರ ಸರ್ಕಾರ,ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಸಹಕಾರ ಪಡೆದು ಕಾಣೆಯಾದವರ ಪತ್ತೆ ಮಾಡಲಾಗುತ್ತಿದೆ. ನೌಕಾಪಡೆಯ ನೆರವನ್ನೂ ಸಹ ಹುಡುಕಾಟಕ್ಕೆ ಬಳಸಿಕೊಳ್ಳಲಾಗಿದೆ. 12 ನಾಟಿಕಲ್ ಮೈಲ್ ಮಾತ್ರ ರಾಜ್ಯದ ವ್ಯಾಪ್ತಿಗೆ ಬರುತ್ತಿದ್ದು, ಮಹಾರಾಷ್ಟ್ರ, ಗೋವಾ ಮಧ್ಯೆ ಮೀನುಗಾರರು ನಾಪತ್ತೆಯಾಗಿರುವ ಮಾಹಿತಿ ಇದೆ. ಹೀಗಾಗಿ ಮೀನುಗಾರರನ್ನು ಹುಡುಕುವ ಜವಾಬ್ದಾರಿ ಆ ಎರಡು ರಾಜ್ಯ ಸರ್ಕಾರಗಳ ಮೇಲೂ ಇದೆ. ಶುಕ್ರವಾರ ಮೀನುಗಾರರ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರ ನೀಡಲಾಗಿದೆ ಎಂದು ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link