ಅಂತ್ಯಕ್ರಿಯೆ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುತ್ತಿದ್ದ ಐದು ಜನರಿದ್ದ ಕಾರು ಪಲ್ಟಿಯಾಗಿ ಕಾಲುವೆಗೆ ಬಿದ್ದಿದ್ದು, ಐದೂ ಜನ ಮುಳುಗಿ ಸಾವನ್ನಪ್ಪಿದ್ದಾರೆ. ಕಡಬಿ ಗ್ರಾಮದ ಒಂದೇ ಕುಟುಂಬದ ನಿವಾಸಿಗಳಾದ ಪಕ್ಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60), ಲಗಮಣ್ಣ ಪೂಜೇರಿ(38), ಪಾರವ್ವ ಪೂಜೇರಿ(50), ಲಕ್ಷ್ಮೀ ಪೂಜೇರಿ(40) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಇನ್ನು ಕಾರು ಚಾಲಕ ಅಡಿವೆಪ್ಪ ಮಾಳಗಿ ಎಂಬಾತ ಕಾರು ಕಾಲುವೆಗೆ ಬೀಳುತ್ತಿದ್ದಂತೆ ಈಜಿ ದಡ ಸೇರುವ ಮೂಲಕ ಬದುಕುಳಿದಿದ್ದಾನೆ. ಗೋಕಾಕ್ ಪಟ್ಟಣದಲ್ಲಿರುವ ಸಂಬಂಧಿ ಲಕ್ಷ್ಮಣ ಎಂಬುವರ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಕಡಬಿ ಗ್ರಾಮಕ್ಕೆ ಪೂಜೇರಿ ಕುಟುಂಬ ವಾಪಸ್ ಆಗುತ್ತಿತ್ತು.
ಆಗ ಚಾಲಕನ ನಿಯಂತ್ರಣ ತಪ್ಪಿ ಕಾರು ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಬಿದ್ದು ಈ ದುರ್ಘಟನೆ ನಡೆದಿದೆ. ಕಾರು ಕಾಲುವೆಗೆ ಬೀಳುತ್ತಿದ್ದಂತೆ ಸ್ಥಳೀಯರು ನೀರುಪಾಲಾದವರ ರಕ್ಷಣೆಗೆ ಯತ್ನಿಸಿದ್ದಾರೆ. ಆದರೆ ನೀರು ರಭಸವಾಗಿ ಹರಿಯುತ್ತಿರುವ ಕಾರಣ ರಕ್ಷಣಾ ಕಾರ್ಯ ಸಾಧ್ಯವಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳ ಶೋಧ ಕಾರ್ಯ ಕೈಗೊಂಡಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ