ಹೈದರಾಬಾದ್:
‘ಅಂಗಡಿಯಿಂದ ಬೀಡಿ ತರಲು ತಡಮಾಡಿದ ಎಂದು ಕುಡುಕ ತಂದೆಯೊಬ್ಬ ತನ್ನ ಮಗನನ್ನೇ ಜೀವಂತವಾಗಿ ಸುಟ್ಟು ಕೊಂದಿರುವ ಭಯಾನಕ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
6 ನೇ ತರಗತಿ ಓದುತ್ತಿದ್ದ ಚರಣ್ ಮೃತ ಬಾಲಕ. ಬಾಲು ಎಂಬಾತ ಕೊಲೆಗೈದಿರುವ ಆರೋಪಿ ತಂದೆ. ಕೂಲಿ ಕಾರ್ಮಿಕನಾಗಿರುವ ಬಾಲು ಇದೇ 17ರಂದು ಬೀಡಿ ತರಲೆಂದು ಮಗನನ್ನು ಅಂಗಡಿಗೆ ಕಳುಹಿಸಿದ್ದ. ಆದರೆ ಚರಣ್ ವಾಪಸ್ ಬರಲು ತಡವಾಗಿದೆ.
ಇದೇ ಕಾರಣಕ್ಕೆ ಈ ಕುಡುಕ ಅಪ್ಪನ ಸಿಟ್ಟು ನೆತ್ತಿಗೇರಿದೆ. ಅದರ ಜತೆಗೆ, ತನ್ನ ಮಗ ಸರಿಯಾಗಿ ಓದಿನ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಸಿಟ್ಟು ಬೇರೆ. ಇದರಿಂದ ಮಗನನ್ನು ಹಿಗ್ಗಾಮುಗ್ಗ ಥಳಿಸಿದ್ದಾನೆ. ಮಗನಿಗೆ ಬೀಳುತ್ತಿರುವ ಏಟನ್ನು ನೋಡಲಾಗದ ತಾಯಿ ಮಧ್ಯೆ ಪ್ರವೇಶ ಮಾಡಿದ್ದಾಳೆ. ಈ ಸಂದರ್ಭದಲ್ಲಿ ಪಾಪಿ ತಂದೆ, ಪತ್ನಿಯನ್ನು ನೂಕಿ ಚರಣ್ ಮೇಲೆ ಟರ್ಪೆಂಟೇನ್ ಎಣ್ಣೆ ಸುರಿದಿದ್ದಾನೆ. ನಂತರ ಬೀಡಿ ಹತ್ತಿಸಿ ಅದೇ ಬೆಂಕಿಕಡ್ಡಿಯನ್ನು ಮಗನ ಮೇಲೆಸೆದು ಬೆಂಕಿ ಹಚ್ಚಿದ್ದಾನೆ.
ಬಾಲಕನ ಚೀರಾಟ ಕೇಳಿದ ಅಕ್ಕಪಕ್ಕದವರು ಧಾವಿಸಿ ಬಂದು ನೀರುಸುರಿದು ಬೆಂಕಿ ಆರಿಸುವಷ್ಟರಲ್ಲಿ ಬಾಲಕ ಶೇ.90 ರಷ್ಟು ಸುಟ್ಟ ಗಾಯಗಳಾಗಿದ್ದವು. ಕೂಡಲೇ ಆತನನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದೇ ವೇಳೆ ತಂದೆ ಬಾಲುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ